ದತ್ತ ಜಯಂತಿ ಪ್ರಯುಕ್ತ ಬಹು ಜನರ ಅಪೇಕ್ಷೆ ಮೇರೆಗೆ ಮತ್ತೊಮ್ಮೆ
ಮೂಲಮರಾಠಿಯಲ್ಲಿದ್ದ ಶ್ರೀ ಗುರುಚರಿತ್ರೆಯನ್ನು ಸಂಸ್ಕೃತಕ್ಕೆ ಪ್ರಪ್ರಥಮವಾಗಿ ಅನುವಾದಿಸಿದ ಪೂಜ್ಯರಾದ ಪರಮಹಂಸ ಪರಿವ್ರಾಜಾಕಾಚಾರ್ಯ ಶ್ರೀ ಶ್ರೀ ವಾಸುದೇವಾನಂದ ಸರಸ್ವತಿ ಮಹಾರಾಜರಿಂದ (ಟೇಂಬೆ ಮಹಾರಾಜರೆಂದು ಪ್ರಸಿದ್ಧಿ) ರಚಿತವಾದ ಹಲವಾರು ದತ್ತಾತ್ರೇಯ ಸ್ತೋತ್ರಗಳಿವೆ, ಅವುಗಳನ್ನು ಪ್ರಮುಖವಾದ ಸ್ತೋತ್ರ ಇದಾಗಿದೆ.

|| ಜಯಲಾಭಾದಿಕಾರಕಂ ಶ್ರೀ ದತ್ತಾತ್ರೇಯ ಸ್ತೋತ್ರಂ ||
ದತ್ತಾತ್ರೇಯಂ ಮಹಾತ್ಮಾನಂ ವರದಂ ಭಕ್ತವತ್ಸಲಂ |
ಪ್ರಪನ್ನಾರ್ತಿಹರಂ ವಂದೇ ಸ್ಮತೃಗಾಮೀ ಸ ಮಾವತು ||೧||
ಮಹಾತ್ಮನೂ, ವರವನ್ನು ನೀಡುವವನೂ, ಭಕ್ತವತ್ಸಲನೂ, ತನ್ನನ್ನು ನಂಬಿದವರ ಕಷ್ಟಗಳನ್ನು ನಿವಾರಿಸುವವನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಿಸುವವರಿಂದ ಮಾತ್ರ ತಿಳಿಯಲ್ಪಡುವವನಾದ ಅವನು ನನ್ನನ್ನು ರಕ್ಷಿಸಲಿ.
ದೀನಬಂಧುಂ ಕೃಪಾಸಿಂಧುಂ ಸರ್ವಕಾರಣಕಾರಣಂ |
ಸರ್ವರಕ್ಷಾಕರಂ ವಂದೇ ಸ್ಮತೃಗಾಮೀ ಸ ಮಾವತು ||೨||
ದೀನರ ಬಂಧುವೂ, ಕೃಪೆಯ ಸಾಗರನೂ, ಜಗತ್ತಿನ ಎಲ್ಲ ಕಾರಣಗಳಿಗೂ ಕಾರಣನೂ, ಎಲ್ಲರನ್ನು ರಕ್ಷಿಸುವವನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದ ಗೋಚರನಾಗುವ ಅವನು ನನ್ನನ್ನು ರಕ್ಷಿಸಲಿ.

ಶರಣಾಗತದೀನಾರ್ತ ಪರಿತ್ರಾಣ ಪರಾಯಣಂ |
ನಾರಾಯಣಂ ವಿಭುಂ
ವಂದೇ ಸ್ಮತೃಗಾಮೀ ಸ ಮಾವತು ||೩||
ತನ್ನಲ್ಲಿ ಶರಣಾಗತರಾದ ದೀನರ, ಆರ್ತರ ರಕ್ಷಣೆಯೇ ವ್ರತವಾಗಿರುವ, ನಾರಾಯಣನೂ, ವ್ಯಾಪಕನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದಲೇ ಗೋಚರನಾಗುವ ಅವನು ನನ್ನನ್ನು ರಕ್ಷಿಸಲಿ.
ಸರ್ವಾನರ್ಥಹರಂ ದೇವಂ ಸರ್ವಮಂಗಲ ಮಂಗಲಂ |
ಸರ್ವಕ್ಲೇಶಹರಂ ವಂದೇ ಸ್ಮತೃಗಾಮೀ ಸ ಮಾವತು ||೪||
ಎಲ್ಲ ಅನರ್ಥಗಳನ್ನೂ ನಿವಾರಿಸುವ ದೇವನಾದ, ಎಲ್ಲ ಮಂಗಲಗಳಿಗೂ ಮಂಗಲಕರನಾದ, ಎಲ್ಲ ಸಂಕಷ್ಟಗಳನ್ನೂ ನಾಶಮಾಡುವ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದ ದರ್ಶನ ನೀಡುವವನಾದ ಅವನು ನನ್ನನ್ನು ರಕ್ಷಿಸಲಿ.
ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ |
ಭಕ್ತಾಭೀಷ್ಠಪ್ರದಂ ವಂದೇ ಸ್ಮತೃಗಾಮೀ ಸ ಮಾವತು ||೫||
ಪಾಪವೆಂಬ ಕೆಸರನ್ನು ಒಣಗಿಸುವವನೂ, ಜ್ಞಾನವೆಂಬ ದೀಪವನ್ನು ಬೆಳಗಿಸುವವನೂ, ಭಕ್ತರ ಅಭೀಷ್ಟಗಳನ್ನು ನೀಡುವವನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದ ಹೊಂದತಕ್ಕವನಾದ ಅವನು ನಮ್ಮನ್ನು ರಕ್ಷಿಸಲಿ.

ಸರ್ವರೋಗಪ್ರಶಮನಂ ಸರ್ವಪೀಡಾ ನಿವಾರಣಂ |
ತಾಪಪ್ರಶಮನಂ ವಂದೇ ಸ್ಮತೃಗಾಮೀ ಸ ಮಾವತು ||೬||
ಎಲ್ಲ ರೋಗಗಳನ್ನು ಶಮನ ಮಾಡುವವನೂ, ಎಲ್ಲ ಪೀಡೆಗಳನ್ನು ನಿವಾರಿಸುವವನೂ, ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪಗಳನ್ನು ಶಾಂತಗೊಳಿಸುವವನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದ ಗೋಚರನಾಗುವ ಅವನು ನನ್ನನ್ನು ರಕ್ಷಿಸಲಿ.
ಬ್ರಹ್ಮಣ್ಯಂ ಧರ್ಮತತ್ತ್ವಜ್ಞಂ ಭಕ್ತಿಕೀರ್ತಿ ವಿವರ್ಧನಂ |
ಆಪದುದ್ಧರಣಂ ವಂದೇ ಸ್ಮತೃಗಾಮಿ ಸ ಮಾವತು ||೭||
ಪರಮಾತ್ಮನೂ, ಧರ್ಮತತ್ತ್ವವನ್ನು ಅರಿತಿರುವವನೂ, ಭಕ್ತಿ ಮತ್ತು ಕೀರ್ತಿಯನ್ನು ವರ್ಧಿಸುವವನೂ, ಆಪತ್ತಿನಿಂದ ರಕ್ಷಿಸುವವನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದಲೇ ಪಡೆಯಲ್ಪಡುವನಾದ ಅವನು ನನ್ನನ್ನು ರಕ್ಷಿಸಲಿ.
ಜನ್ಮಸಂಸಾರಬಂಧಘ್ನಂ ಸ್ವರೂಪಾನಂದದಾಯಕಂ |
ನಿಃಶ್ರೇಯಸಪ್ರದಂ ವಂದೇ ಸ್ಮತೃಗಾಮೀ ಸ ಮಾವತು ||೮||
ಜನ್ಮದಿಂದಲೇ ಬರುವ ಸಂಸಾರವೆಂಬ ಬಂಧವನ್ನು ಬಿಡಿಸುವವನೂ, ತನ್ನ ಸ್ವರೂಪವೇ ಆಗಿರುವ ಆನಂದವನ್ನು ನೀಡುವವನೂ, ಮೋಕ್ಷವನ್ನೇ ನೀಡುವವನೂ ಆದ ದತ್ತಾತ್ರೇಯನನ್ನು ವಂದಿಸುವೆನು. ಸ್ಮರಣೆ ಮಾತ್ರದಿಂದ ಹೊಂದತಕ್ಕವಾದ ಅವನು ನನ್ನನ್ನು ರಕ್ಷಿಸಲಿ.

ಜಯಲಾಭಯಶಃ ಕಾಮದಾತುರ್ದತ್ತಸ್ಯ ಯಃ ಸ್ತವಂ |
ಭೋಗಮೋಕ್ಷಪ್ರದಸ್ಯೇಮಂ ಪ್ರಪೇಠೇತ್ಸ ಕೃತೀ ಭವೇತ್ ||೯||
ಜಯ, ಲಾಭ, ಯಶಸ್ಸು, ಇಚ್ಛಿಸಿದ್ದನ್ನೆಲ್ಲವನ್ನೂ ನೀಡುವ ಮತ್ತು ಸಕಲ ಭೋಗಗಳನ್ನು, ಮೋಕ್ಷವನ್ನೂ ನೀಡುವ ಈ ದತ್ತನ ಸ್ತೋತ್ರವನ್ನು ಯಾರು ಚೆನ್ನಾಗಿ ಪಠಿಸುತ್ತಾನೋ ಅವನು ಕೃತಾರ್ಥನಾಗುತ್ತಾನೆ.
ಇತಿ ಪ.ಪ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ ಜಯಲಾಭಾದಿಕಾರಕಂ ಶ್ರೀ ದತ್ತಾತ್ರೇಯ ಸ್ತೋತ್ರಂ ಸಂಪೂರ್ಣಮ್.
– ರಾಮಚಂದ್ರ, ಬಾಳಗಂಚಿ