Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಗುರುಪ್ರತಿಪದೆ – ನರಸಿಂಹ ಸರಸ್ವತೀಗಳು ಕದಲಿವನ ಪ್ರವೇಶಿಸಿದ ದಿನ

Published

on

ಕೃತಯುಗದಲ್ಲಿ ಅವತರಿಸಿದ ಶ್ರೀ ದತ್ತಾತ್ರೇಯನೇ ಕಲಿಯುಗದಲ್ಲಿ ಶ್ರೀ ನರಸಿಂಹ ಸರಸ್ವತಿಯಾಗಿ ಅವತಾರವೆತ್ತಿದನು. 13ನೇ ಶತಮಾನದಲ್ಲಿ ಸನಾತನಧರ್ಮವು ಅಧರ್ವಿುಯರಿಂದ ಗ್ಲಾನಿಗೊಳಗಾದಾಗ ಶ್ರೀ ದತ್ತಾತ್ರೇಯನ ದ್ವಿತೀಯಾವತಾರಿಗಳಾದ ಶ್ರೀ ನರಸಿಂಹ ಸರಸ್ವತಿಗಳು ಅವತರಿಸಿ ಧರ್ಮವನ್ನು ಸಂರಕ್ಷಿಸಿದರು.

ಅಲ್ಲಿ ಶೃಂಗೇರಿ‌ ದಕ್ಷಿಣಾಮ್ನಾಯ 10 ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ವಿದ್ಯಾತೀರ್ಥ(ವಿದ್ಯಾಶಂಕರ)ರ ಶಿಷ್ಯ ಪರಂಪರೆಯವರಾದ ಶ್ರೀ ಕೃಷ್ಣ ಸರಸ್ವತಿಗಳೆಂಬ ಯತಿವರೇಣ್ಯರಿಂದ ಹತ್ತು ವರ್ಷದ ನರಹರಿಯು ಸಂನ್ಯಾಸ ಸ್ವೀಕರಿಸಿ, ‘ನರಸಿಂಹ ಸರಸ್ವತಿ’ ಎಂಬ ಅಭಿದಾನ ಪಡೆದರು. ಮುಂದೆ ಧರ್ಮಜಾಗೃತಿಗಾಗಿ
ಶ್ರೀ ನರಸಿಂಹ ಸರಸ್ವತಿಗಳು ಭರತಖಂಡದಲ್ಲೆಲ್ಲ ತೀರ್ಥಯಾತ್ರೆ ಕೈಗೊಂಡರು. ತಾವು ಹೋದಲ್ಲೆಲ್ಲ ಅಧರ್ಮವನ್ನು ಅಳಿಸಿ ಧರ್ಮವು ನೆಲೆ ನಿಲ್ಲುವಂತೆ ಮಾಡಿದರು. ಧರ್ಮದ ಬಗ್ಗೆ ಜನರಲ್ಲಿದ್ದ ಮೌಢ್ಯವನ್ನು ಹೋಗಲಾಡಿಸಿ, ವಿಶ್ವಾಸ ವೃದ್ಧಿಸಿದರು.

ಶ್ರೀಗುರುವು ಶೀಘ್ರವಾಗಿ ಶ್ರೀಶೈಲ ಪರ್ವತಕ್ಕೆ ಹೋಗಿ ಪಾತಾಳ ಗಂಗೆಯಲ್ಲಿ ಸ್ನಾನವನ್ನಾಚರಿಸಿ ಶಿಷ್ಯರನ್ನು ಕರೆದು ಅವರಿಗೆ ಆದೇಶವಿತ್ತರು. “ನನ್ನ ಕಾರ್ಯವು ಸಂಪೂರ್ಣವಾಯಿತು. ಪುಷ್ಪಾಸನವನ್ನು ಸಿದ್ಧಪಡಿಸಿ. ಇಲ್ಲಿಂದ ವಿಭುಕಳೆ ಇರುವೆಡೆಗೆ ಹೋಗಬೇಕು. ದುಷ್ಟರು ನನ್ನನ್ನು ನೋಡಬಾರದು” ಎಂದು ಹೇಳಿದ ಶ್ರೀಗುರುವಿನ ಆದೇಶವನ್ನು ಪಾಲಿಸಿ ಶಿಷ್ಯರು ತಾವರೆ ಹೂಗಳು ಮುಂತಾದುವನ್ನು ತಂದು ಬಾಳೆಯ ಎಲೆಯ ಮೇಲೆ ಹರಡಿ ಸುಖಾಸನವಾಗುವಂತೆ ಅಲಂಕರಿಸಿದರು. ಪರಮ ಪವಿತ್ರವಾದ ಪೀಠವನ್ನು ನಿರ್ಮಿಸಿ ಗಂಗಾ ಪ್ರವಾಹದಲ್ಲಿ ವಿಚಿತ್ರವಾಗಿ ನಿಲ್ಲಿಸಿದರು. ಶ್ರೀಗುರುವು ತನ್ನ ಭಕ್ತರಿಗೆ, “ನೀವು ತ್ವರೆಯಾಗಿ ನನ್ನ ಗಂಧರ್ವನಗರಕ್ಕೆ ಹೋಗಿ. ನನ್ನ ಗೃಹವು ಅಲ್ಲೇ ಇದೆ. ಸದ್ಭಕ್ತರಿಗೆ ಮಾತ್ರವೇ ನನ್ನ ದರ್ಶನ ಆಗುವಹಾಗೆ ನಾನು ಉಪಾಯವನ್ನು ಅವಲಂಬಿಸಿದ್ದೇನೆ. ನನ್ನ ಭಕ್ತರ ಗೃಹದಲ್ಲೇ ಸದಾ ಬಿಡದೇ ಇರುತ್ತೇನೆ” ಎಂದು ಆ ಭಗವಂತನು ಹೇಳಿ ಸಂತೋಷದಿಂದ ಪುಷ್ಪಾಸನದ ಮೇಲೆ ಉಪವಿಷ್ಠರಾದರು. ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷದಲ್ಲಿ ರಾಕ್ಷಸ ಗುರುದೇವತೆ ಶುಕ್ರನ ವಾರದಲ್ಲಿ ಪಾಡ್ಯಮಿಯ ದಿನ ಪುಷ್ಯಮೀ ನಕ್ಷತ್ರದಲ್ಲಿ ಚಂದ್ರನಿರಲು ದೇವಗುರುವಾದ ಬೃಹಸ್ಪತಿ ಕನ್ಯೆಯಲ್ಲಿರಲು ಸೂರ್ಯನು ಕುಂಭದಲ್ಲಿರಲು ಪುಣ್ಯತಮವಾದ ದಿನ ಬಹುಧಾನ್ಯ ಸಂವತ್ಸರ ದೇವತೆಗಳು ಪುಷ್ಪ ವೃಷ್ಟಿ ಮಾಡುತ್ತಿರಲು ಶ್ರೀಗುರುವು ಪುಷ್ಪಾಸನದ ಮೇಲೆ ಮಂಡಿತರಾದರು. ಶ್ರೀಗುರುವು ನದಿ ಪ್ರವಾಹದ ಮಧ್ಯದಿಂದ, “ನಾನು ಪುಷ್ಪಾಸನಸ್ಥನಾಗಿ ನಿಜಸ್ಥಾನಕ್ಕೆ ಹೋಗುತ್ತಿದ್ದೇನೆ. ನೀವು ನನಗೆ ಪ್ರಿಯರು. ನಿಮಗೆ ವಾಯು ಮುಖೇನ ಪ್ರಸಾದ ಪುಷ್ಪಗಳನ್ನು ಕಳುಹಿಸುತ್ತೇನೆ. ನಾನು ಕಳುಹಿಸುವ ನಾಲ್ಕು ಪ್ರಸಾದ ಪುಷ್ಪಗಳನ್ನು ನೀವೇ ಗ್ರಹಿಸಬೇಕು. ಅವನ್ನು ಭಕ್ತಿಯಿಂದ ಸ್ವೀಕರಿಸಿ ನನ್ನ ಪಾದುಕೆಗಳನ್ನು ಅರ್ಚಿಸಿದರೆ ಅಭೀಷ್ಟಸಿದ್ಧಿಯಾಗುವುದು. ಗೀತಗಳೆಂದರೆ ನನಗೆ ಬಹಳ ಪ್ರೀತಿ. ಆದ್ದರಿಂದ ಪ್ರತಿದಿನವೂ ನನ್ನನ್ನುದ್ದೇಶಿಸಿ ಗೀತಗಳನ್ನು ಗಾನಮಾಡಿ. ಭಕ್ತಿಯಿಂದ ನನ್ನ ಅವತಾರ ಕಥೆಗಳನ್ನು ಗಾನ ಮಾಡುವವರ ಗೃಹದಲ್ಲಿ ನಾನು ನಿತ್ಯವೂ ನಿವಾಸಮಾಡುತ್ತೇನೆ. ಅವರ ಮನೆಗಳಲ್ಲಿ ದೈವಭೀತಿಯಿರುವುದಿಲ್ಲ. ಅಖಂಡವಾದ ಸಿರಿಸಂಪದಗಳು ಅವರಿಗೆ ಉಂಟಾಗುತ್ತವೆ. ಅಂತಹವರು ಮೋಹದಲ್ಲಿ ಬೀಳುವುದಿಲ್ಲ. ನನ್ನಲ್ಲಿ ಭಕ್ತಿ ಇರುವವರಿಗೆ ನನ್ನ ಅನುಗ್ರಹ ದೊರಕುವುದು. ನನ್ನ ಭಕ್ತನಿಗೆ ವ್ಯಾಧಿಗಳು, ಪಾಪಗಳು, ದೈನ್ಯವು, ಕ್ಷೀಣದೆಶೆ ಬರಲಾರದು. ಅಂಥ ನನ್ನ ಭಕ್ತರು ಶ್ರೀಮಂತರಾಗಿ, ಪುತ್ರಪೌತ್ರರಿಂದ ಕೂಡಿ, ಶತಾಯುಷಿಗಳಾಗಿ ಜೀವಿಸಿ, ಕೊನೆಯಲ್ಲಿ ಮುಕ್ತಿ ಹೊಂದಬಲ್ಲರು. ನನ್ನ ಈ ವಿಚಿತ್ರವಾದ ಚರಿತ್ರೆಯನ್ನು ಓದುವವರು, ಸಾವಧಾನವಾಗಿ ಕೇಳುವವರು, ನನಗೆ ಹಿತರು. ಅವರ ವಂಶಸ್ಥರಲ್ಲಿ ಕೂಡ ಲಕ್ಷ್ಮಿ ನಿಶ್ಚಲವಾಗಿ ಇರುತ್ತಾಳೆ. ಈ ನನ್ನ ವಚನಗಳು ನಿಸ್ಸಂಶಯವಾಗಿ ಸತ್ಯವಾದವು” ಎಂದು ಶ್ರೀಗುರುವು ಭಕ್ತರಿಗೆ ಉಪದೇಶಿಸಿ ಗುಪ್ತ ರೂಪರಾಗಿ ಅಂತರ್ಧಾನವಾದರು. ಅಲ್ಲಿದ್ದ ಭಕ್ತರು ಆ ದೃಶ್ಯವನ್ನು ಕಂಡು ವಿಸ್ಮಿತರಾದರು. ನದಿದಡದಲ್ಲಿ ನಿಂತಿದ್ದ ಅಂಬಿಗರು ಚಿಂತಾಯುಕ್ತರಾಗಿ ದೋಣಿಗಳಲ್ಲಿ ಹೊರಟರು. ಅವರು ಮತ್ತೆ ಹಿಂತಿರುಗಿ ಭಕ್ತರಿಗೆ, “ದೇವದೇವನಾದ ಶ್ರೀಗುರುವು ನದಿ ಮಧ್ಯದಲ್ಲಿ ಸಾಕ್ಷಾತ್ತಾಗಿ ದರ್ಶನ ಕೊಟ್ಟರು. ಅಯ್ಯಾ ಶಿಷ್ಯರೇ, ಈಗ ವಿಚಿತ್ರವಾಗಿ ಪರಮ ಪವಿತ್ರವಾದ ಯತಿಸ್ವರೂಪವನ್ನು ನದಿಮಧ್ಯದಲ್ಲಿ ಸುಮನಸ್ಸಮೂಹವಾಗಿದ್ದುದನ್ನು ನಾವು ನೋಡಿದೆವು. ಎರಡು ಕೈಗಳಲ್ಲಿ ದಂಡ ಕಮಂಡಲಗಳನ್ನು ಹಿಡಿದು ಯತಿರೂಪಿಯಾಗಿ ‘ನಮ್ಮ ಶಿಷ್ಯರು ಅಲ್ಲಿ ಇದ್ದಾರೆ. ಅವರಿಗೆ ತಿಳಿಸಿ ಎಂದು ಹೇಳಿದರು” ಎಂದು ತಿಳಿಸಿದರು.

ಆ ಶ್ರೀ ನೃಸಿಂಹ ಸರಸ್ವತಿ ಯತೀಂದ್ರರು, “ಕದಳೀವನಕ್ಕೆ ಹೋಗುತ್ತಿದ್ದೇನೆ. ನೀವು ಗಂಧರ್ವನಗರಕ್ಕೆ ಹೊರಡಿ” ಎಂದು ಆಣತಿ ಕೊಟ್ಟರು. ಅವರ ಪಾದುಕೆಗಳು ಸ್ವರ್ಣಮಯವಾಗಿ ಪ್ರಕಾಶಿಸುತ್ತಿದ್ದವು. ಶ್ರೀಗುರುವು ಹೇಳಿದ ಮಾತುಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಅದ್ದರಿಂದ ನೀವಿನ್ನು ಸುಖವಾಗಿ ನಿಮ್ಮ ಗೃಹಗಳಿಗೆ ಹೊರಡಿ. ಭುಕ್ತಿ ಮುಕ್ತಿಪ್ರದವಾದ ಭಕ್ತಿಯನ್ನವಲಂಬಿಸಿ ಶಿಷ್ಟ ಕಾರ್ಯಗಳನ್ನು ಮಾಡುತ್ತಾ ನಿಮ್ಮ ಮನೆಗಳಲ್ಲಿ ನೆಲೆಸಿ. ಶ್ರೀಗುರುವು ಕಳುಹಿಸಿದ ಪ್ರಸಾದ ಪುಷ್ಪಗಳು ನಿಮಗಾಗಿ ಇಲ್ಲಿಗೇ ಬರುತ್ತವೆ. ಅವನ್ನು ತೆಗೆದುಕೊಳ್ಳಿ” ಎಂದು ಶ್ರೀಗುರುವು ಹೇಳಿದ ಸಂದೇಶವನ್ನು ಆ ಶಿಷ್ಯರಿಗೆ ಬಿನ್ನವಿಸಿ ಆ ಅಂಬಿಗರು ಅಲ್ಲಿಂದ ಹೊರಟರು. ಶಿಷ್ಯರು ಅಂಬಿಗರು ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ, ಅವನ್ನು ಮತ್ತೆ ಮತ್ತೆ ನೆನಸಿಕೊಳ್ಳುತ್ತಾ ಪ್ರಸಾದ ಪುಷ್ಪಗಳಿಗಾಗಿ ಕಾಯುತ್ತಾ ಅಲ್ಲಿಯೇ ನಿಂತಿದ್ದರು. ನಾಲ್ಕು ಪ್ರಸಾದಪುಷ್ಪಗಳು ಬಂದವು. ಶ್ರೀಗುರುವು ಅವುಗಳನ್ನು ಕಳುಹಿಸಿದ್ದರು. ಮುಖ್ಯಶಿಷ್ಯರು ಅವುಗಳನ್ನು ಗ್ರಹಿಸಿದರು”. ಆಗ ನಾಮಧಾರಕನು ಸಿದ್ಧಮುನಿಯನ್ನು, “ಸ್ವಾಮಿ, ಶ್ರೀಗುರುವಿನ ಮುಖ್ಯಶಿಷ್ಯರು ಎಷ್ಟು ಜನ? ಅವರಲ್ಲಿ ಯಾರು ಪ್ರಸಾದ ಪುಷ್ಪಗಳನ್ನು ತೆಗೆದುಕೊಂಡರು?” ಎಂದು ಕೇಳಲು, ಸಿದ್ಧಮುನಿ, “ವತ್ಸ, ಹಿತಕಾರಿಯಾದ ಶ್ರೀಗುರುವಿಗೆ ಅನೇಕ ಶಿಷ್ಯರಿದ್ದರು. ಅವರಲ್ಲಿ ಕೆಲವರು ಗಂಧರ್ವಪುರಿಯಲ್ಲಿದ್ದಾರೆ. ಕೆಲವರು ಸನ್ಯಾಸವನ್ನು ಸ್ವೀಕರಿಸಿದರು. ಮತ್ತೆ ಕೆಲವರು ಗೃಹಸ್ಥರು. ಶ್ರೀಗುರುವು ಸನ್ಯಾಸಿಗಳಾದ ಶಿಷ್ಯರನ್ನು ಯಾತ್ರೆಗಳಿಗೆ ಕಳುಹಿಸಿದ್ದರು. ಅವರು ಯಾತ್ರೆಗಳಿಗೆ ಹೊರಟು ಹೋಗಿದ್ದರು. ಅವರಲ್ಲಿ ಪ್ರಾಧಾನ್ಯ ಕ್ರಮವನ್ನು ಅನುಸರಿಸಿ ಹೇಳುವೆನು ಕೇಳು. ಮೊದಲು ಬಾಲಸರಸ್ವತಿ. ನಂತರ ಕೃಷ್ಣಸರಸ್ವತಿ. ಆ ಮೇಲೆ ಉಪೇಂದ್ರ ಸರಸ್ವತಿ. ಆ ನಂತರ ಮಾಧವ ಸರಸ್ವತಿ. ಗುರುವಿನ ಆಜ್ಞೆಯಿಂದ ಕೆಲವರು ಗೃಹಸ್ಥರಾಗಿದ್ದಾರೆ. ಶ್ರೀಶೈಲಯಾತ್ರೆಯ ಸಮಯದಲ್ಲಿ ಶ್ರೀಗುರುವು ನಾಲ್ವರು ಶಿಷ್ಯರೊಡನೆ ಇದ್ದರು. ಅವರಲ್ಲಿ ಸಾಯಂದೇವನು ಒಬ್ಬನು. ಮತ್ತೊಬ್ಬ ಕವಿ ಎನ್ನುವವನು. ಇನ್ನೊಬ್ಬ ನಂದಿಶರ್ಮ. ಹಾಗೆಯೇ ಎರಡನೆಯ ಕವಿ ಎನ್ನಿಸಿಕೊಂಡ ಸಿದ್ಧನೆನ್ನುವ ನಾನು. ನಾವು ನಾಲ್ವರೂ ಆ ಪುಷ್ಪಗಳನ್ನು ತೆಗೆದುಕೊಂಡೆವು. ಇಗೋ, ದೇವಸಮರ್ಪಿತವಾದ, ಪೂಜಿತವಾದ ಆ ಪ್ರಸಾದ ಪುಷ್ಪವು ಇದೇ, ನೋಡು. ಶ್ರೀಗುರುವಿನ ಮಹಿಮೆಗೆ ಇಷ್ಟು ಎಂಬ ಪರಿಮಾಣವಿಲ್ಲ. ನಾನು ನಿನಗೆ ಸಂಗ್ರಹವಾಗಿ ಶ್ರೀಗುರುವಿನ ಮಹಿಮೆಯನ್ನು ತಿಳಿಸಿದ್ದೇನೆ. ಕಾಮದವಾದ, ಈ ಶ್ರೀಗುರುಚರಿತ್ರೆ, ನಾನು ಹೇಳಿದ್ದು, ದಾರಿದ್ರ್ಯ, ಪಾಪಗಳೆನ್ನುವ ಕಾಳ್ಗಿಚ್ಚನ್ನು ಆರಿಸಿ ಕಲ್ಪದ್ರುಮದಂತೆ ಶಾಂತಿಯನ್ನು ಉಂಟುಮಾಡುತ್ತದೆ. ಶ್ರೀಗುರುಚರಿತ್ರೆಯನ್ನು ಬರೆಯುವವರು, ಓದುವವರು, ಕೇಳುವವರು ಇಹಲೋಕ ಪರಲೋಕಗಳಲ್ಲಿ ಸಂತುಷ್ಟರಾಗಿರುತ್ತಾರೆ. ಅಂತಹವರ ಉಭಯ ಕುಲಗಳೂ ಪುತ್ರ ಪೌತ್ರಾಭಿವೃದ್ಧಿಯಾಗಿ ಆನಂದದಿಂದಿರುತ್ತಾರೆ. ಅಂಥವರು ಧರ್ಮಾರ್ಥಕಾಮಗಳನ್ನು ಪಡೆಯುತ್ತಾರೆ. ಶ್ರೀಗುರುವಿನ ಸೇವಕನು ಸುಗತಿಯನ್ನು ಹೊಂದುತ್ತಾನೆ” ಎಂದು ಸಿದ್ಧಮುನಿಯು ನಾಮಧಾರಕನಿಗೆ ಉಪದೇಶಿಸಿದರು. ಶ್ರೀಗುರುವಿನ ಚರಿತ್ರೆಯನ್ನು ಕೇಳಿದ ನಾಮಧಾರಕನು ಸಂಪೂರ್ಣ ಮನೋರಥನಾದನು. ಸಿದ್ಧಮುನಿಯ ಮಾತುಗಳನ್ನು ಕೇಳಿದ ನಾಮಧಾರಕನು ಸಂತೋಷಗೊಂಡವನಾಗಿ, ಶತಾಯುವಾಗಿ, ಕವಿಯಾಗಿ, ಪುತ್ರಪ್ರಾಪ್ತಿ ಸಂಪತ್ಪ್ರಾಪ್ತಿ ಹೊಂದಿ ಶ್ರೀಗುರುವಿನಲ್ಲಿ ಭಕ್ತಿಯುಕ್ತನಾದನು.

ಶ್ರೀನಾರಾಯಣ ರಾಯರು ಮತ್ತು ಕಮಲಾಬಾಯಿ ಎಂಬ ದಂಪತಿಗಳು ಈ ನಿರ್ಗುಣ ಪಾದುಕೆಯನ್ನು ಸೇವೆ ಮಾಡಿದ್ದರಿಂದ ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ತಮ್ಮ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಮಹಾಪುರುಷರದ ಶ್ರೀಧರ ಸ್ವಾಮಿಗಳನ್ನು ಸತ್ಸಂತಾನವಾಗಿ ಪಡೆದು ಕೃತಕತ್ಯರಾಗಿದ್ದಲ್ಲದೆ ದತ್ತಭಕ್ತರಿಗೆಲ್ಲ ಮಹದೋಪಕಾರಮಾಡಿದರು. ಈ ಪಾದುಕೆಯ ಸೇವನೆಯಿಂದ ಇಂದಿಗೂ ಪ್ರತ್ಯಕ ಮತ್ತು ಪರೋಕ್ಷವಾಗಿ ಮಾರ್ಗದರ್ಶನ ಪಡೆಯುತ್ತಿರುವವರು ಹಲವರಿದ್ದಾರೆ.

ಭೌತಿಕ ಶರೀರವನ್ನು ತ್ಯಜಿಸಲು ನಿರ್ಧರಿಸಿದ ಶ್ರೀಗಳು ಶ್ರೀಶೈಲಕ್ಕೆ ಬಂದರು. ಶಾಲಿವಾಹನ ಶಕೆ 1380 ಮಾಘ ಕೃಷ್ಣ ಪ್ರತಿಪದೆಯಂದು ಶ್ರೀಶೈಲದ ಕದಲೀವನದಲ್ಲಿ ನಿಜಾನಂದವನ್ನು ಹೊಂದಿದರು. ‘ಗುರು ಪ್ರತಿಪದೆ’ಯೆಂದು ಕರೆಯಲಾಗುವ ಈ ದಿನ ಶ್ರೀ ನರಸಿಂಹ ಸರಸ್ವತಿಗಳ ಕುರಿತು ಇಂದು ಶ್ರದ್ಧಾ ಭಕ್ತಿಯ ವಿಶೇಷ ಪೂಜಾ ಕೈಂಕರ್ಯಗಳು ದೇಶಾದ್ಯಂತ ನೆಡೆಯುತ್ತದೆ.

 

ಶೃಂಗೇರಿ ಜಗದ್ಗುರುಗಳು ತಮ್ಮ ಪರಂಪರೆಯ ಗುರುಗಳ ಅದಿಷ್ಠಾನದ ಮತ್ತು ಪಾದುಕೆಯ ಪೂಜೆಯನ್ನು ಹೊರತುಪಡಿಸಿದರೆ ನೆರೂರಿನಲ್ಲಿ ಸದಾಶಿವ ಬ್ರಹ್ಮೇಂದ್ರರ ಮತ್ತು ಗಾಣಿಗಾಪುರದಲ್ಲಿ ನರಸಿಂಹ ಸರಸ್ವತಿಗಳ ನಿರ್ಗುಣ ಪಾದುಕೆಗಳಿಗೆ ಪೂಜೆಸಲ್ಲಿಸುವ ಎರಡು ಪ್ರಮುಖ ದಿವ್ಯ ಸ್ಥಳವಾಗಿದೆ.

– ವಿಶ್ವಾಸ್. ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!