Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿಯ ಮಹಾಶಿವರಾತ್ರಿ ವೈಭವ

Published

on

ಹೌದು.! ನಾವು ಹಿಂಸೆಯಿಂದ ದೂರವಿರುವ ಹಿಂದುಗಳು , ಯಾರೊಬ್ಬರಿಂದಲೂ ಜನಿಸದ ಯಾರೂ ಅಳಿಸಲಾಗದ ಯಾವ ಭಾರತೀಯ ಸನಾತನಧರ್ಮವಿದೆಯೋ ಅದರ ಅನುಯಾಯಿಗಳು , ಸರ್ವೇ ಜನಾಃ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಒಗತ್ತಿನ ಏಕೈಕ ಧರ್ಮದ ಹಿಂಬಾಲಕರು . ನಮ್ಮ ಸಂಸ್ಕೃತಿಯು ಅವರವರ ಭಾವನೆಗಳಿಗೆ ಬೆಲೆಕೊಟ್ಟು ದೇವರನ್ನು ಅವರವರ ಕಲ್ಪನಾನುಸಾರವಾಗಿ ಶಾಸ್ತ್ರೀಯವಾಗಿ ಆರಾಧಿಸುವ ಹಕ್ಕನ್ನು ನೀಡಿದೆ. ಹಾಗಾಗಿಯೇ ನಮಗೆ ಹತ್ತು-ಹಲವಾರು ದೇವತೆಗಳು ನೂರಾರು ಹಬ್ಬಗಳು. ದೇವನೊಬ್ಬ ನಾಮ ಹಲವು ಎನ್ನುವವರು ನಾವು. ಚೈತ್ರದಿಂದ ಫಾಲ್ಗುಣದವರೆಗೂ ಒಂದಲ್ಲ ಒಂದು ಹಬ್ಬಗಳ ಆಚರಣೆ ಇದ್ದೇ ಇರುತ್ತದೆ. ಸಂಕ್ರಾಂತಿಯ ಸಂಭ್ರಮ ಮುಗಿಯುವಷ್ಟರಲ್ಲಿಯೇ ಮಾಘ ಮಾಸ ಬಂದಾಗಿರುತ್ತದೆ. ಆ ಮಾಘದ ಕೊನೆಯಲ್ಲಿ ಬರುವ ಮಹಾಶಿವರಾತ್ರಿ ಒಂದು ವಿಶಿಷ್ಟವಾದ ಹಬ್ಬ.‌ ಗಂಗಾಧರ – ಶಂಕರ – ಚಂದ್ರಶೇಖರ ಎಂದೆಲ್ಲ ಕರೆಸಿಕೊಳ್ಳುವ ಮಹಾದೇವನ ಆರಾಧನೆಗೆ ಆ ದಿನ ವಿಶೇಷ.

ಶೃಂಗೇರಿ ಎನ್ನುವ ಪುಣ್ಯಕ್ಷೇತ್ರ ಸನಾತನ ಧರ್ಮದ ರಕ್ಷಣೆಗಾಗಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಶಂಕರನ ಸಾಕ್ಷಾದವತಾರಿಗಳಾದ ಶಂಕರ ಭಗವತ್ಪಾದಾಚಾರ್ಯರಿಂದ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವು ಸುಮಾರು ೧೨೦೦ ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟು ತನ್ನ ಅವಿಚ್ಛಿನ್ನಗುರುಪರಂಪರೆಯಿಂದ ಭಕ್ತರನ್ನು ಅನುಗ್ರಹಿಸುತ್ತಿದೆ. ಇಲ್ಲಿ ಎಲ್ಲವೂ ಆಚರಿಸಲ್ಪಡುವುದೇ. ನಮಗೆ ಶಿರಾತ್ರಿಯೂ ಒಂದೇ.. ಕೃಷ್ಣಜನ್ಮಾಷ್ಟಮಿಯೂ ಒಂದೇ.ಹರಿ-ಹರರಿಬ್ಬರೂ ನಮ್ಮ ಪಾಪಹರರೇ ಎನ್ನುವವರು ನಾವು.

ಶಿವರಾತ್ರಿ ಮಾಘಮಾಸದ ಕೃಷ್ಷಪಕ್ಷದಲ್ಲಿ ಬರುವಂತಹ ಹಬ್ಬ.  ಮಾಘಕೃಷ್ಣಚತುರ್ದಶಿಯು ರಾತ್ರಿಯ ಎಂಟನೇ ಮುಹೂರ್ತಕ್ಕಿರುವ ದಿನ ಶಿವರಾತ್ರಿಯನ್ನು ಆಚರಿಸುತ್ತಾರೆ.
ಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ | ಅಹಂ ವಸಾಮಿ ಭೂಪೃಷ್ಠೇ ರಾತ್ರೌ ನೈವ ದಿವಾ ಕಲೌ || ಎನ್ನುವ ಶ್ಲೋಕವು ನಮಗೆ ಶಿವರಾತ್ರಿಯ ದಿನವನ್ನು ಆ ಸಮಯದಲ್ಲಿ ಶಿವ ಭೂಭಾಗನಿವಾಸಿಯಾಗಿರುತ್ತಾನೆಂದು ತಿಳಿಸುತ್ತದೆ. ಭೂಮಿಯಲ್ಲಿ ನನ್ನನ್ನು ಅರ್ಚಿಸಿದವರ ವರ್ಷದ ಪಾಪಗಳ ನಿವಾರಣೆಗಾಗಿ ನೆಲೆಸುತ್ತೇನೆಂದು ಸ್ವತಃ ಶಿವನೇ “ವರ್ಷಪಾಪ ವಿಶುದ್ಧಯೇ” ಎಂಬ ಮಾತಿನಿಂದ ಹೇಳಿದ್ದಾನೆ.

ಈ ದಿನ ಉಪವಾಸವಿರುವುದು , ಶಿವಧ್ಯಾನದ ಜೊತೆ ರಾತ್ರಿಯ ಜಾಗರಣೆ ಮುಖ್ಯವಾಗಿರುವುದಾಗಿದೆ. ಸಾಧಾರಣ ದೇಶದ ಎಲ್ಲಾ ಭಾಗದಲ್ಲೂ ಆಚರಿಸುವ ರಾಷ್ಟ್ರವ್ಯಾಪಿಯಾದ ಹಬ್ಬವಿದು. ಹೀಗೆ ನೆಡೆಯುವ ಶಿವರಾತ್ರಿಯಲ್ಲಿ ನಮ್ಮ ಶೃಂಗೇರಿಯಲ್ಲಿ ಏನೇನೆಲ್ಲ ನೆಡೆಯುತ್ತೆ ನೋಡೋಣ ಬನ್ನಿ..

ಮಲ್ಲಪ್ಪನ ಬೆಟ್ಟದ ಪೂಜೆ.

ಮಲಹಾನಿಕರೇಶ್ವರ ಎಂಬ ನಾಮದಿಂದ ಭಕ್ತಜನಾನುಗ್ರಹವನ್ನು ಮಾಡಿತ್ತಿರುವ ಪರಮೇಶ್ವರ ನೆಲೆಸಿದ ಪಟ್ಟಣದ ಮಧ್ಯದಲ್ಲಿರುವ ಒಂದು ಬೆಟ್ಟವೇ ಅನ್ವರ್ಥವಾಗಿ ಜನರ ಬಾಯಲ್ಲಿ ಇಂದು ಮಲ್ಲಪ್ಪನ ಬೆಟ್ಟವಾಗಿದೆ. ಮಲ ಎಂದರೆ ಕೊಳೆ , ಹಾನಿ ಎಂದರೆ ನಾಶ ‌. ಅಂದರೆ ನಮ್ಮ ಸಂಸಾರದ ಪಾಪಕೊಳೆಗಳ ನಾಶಕ ಎಂಬುದು ಮಲಹಾನಿಕರೇಶ್ವರ ಎಂಬುದರ ಅರ್ಥವಾಗಿದೆ. ಇಲ್ಲಿ ಆಳೆತ್ತರದ ಲಿಂಗದಲ್ಲಿ ಶಂಕರ ನೆಲೆಸಿದ್ದಾನೆ. ವಾಮಾಂಗಿಯಾಗಿ ಭವಾನಿ ಅಮ್ಮನವರು ಮತ್ತು ಎದುರಿನಲ್ಲಿ…………. ಸ್ತಂಭದ ಗಣಪತಿ ನೆಲೆಸಿದ್ದಾರೆ. ” ಅಭಿಷೇಕಪ್ರಿಯೋ ರುದ್ರಃ ” ಎಂಬ ಮಾತು ನಮಗೆ ಗೊತ್ತಿರುವುದೇ. ಅಭಿಷೇಕಮಾತ್ರದಿದಂಲೇ ರುದ್ರ ಸುಪ್ರೀತನಾಗುತ್ತಾನೆ ಎಂಬುದು ಇದರ ಅರ್ಥ. ‘ ಬ್ರಾಹ್ಮಣೋ ಭೋಜನಪ್ರಿಯಃ ‘ ಎಂಬ ಇದೇ ಶ್ಲೋಕದ ಕೊನೆಯ ಸಾಲಿಗೂ ಇದೇರೀತಿಯಾಗಿ ಬ್ರಾಹ್ಮಣ ಭೋಜನದಿಂದಲೇ ತೃಪ್ತನಾಗುತ್ತಾನೆ ಆತನ ತೃಪ್ತಿಗೆ ಹಣದ ಸೋಂಕಿಲ್ಲ ಎಂಬುವುದು ನಿಜಾರ್ಥ.

ವಿಶೇಷವಾಗಿ ಶಿವರಾತ್ರಿಯಂದು ಅಂತಹ ರುದ್ರನಿಗೆ ತುಂಗಾನದಿಯ ನೀರನ್ನು ಬೆಟ್ಟದ ಬೀದಿಯ ಜನರು ಮತ್ತು ಕೆಲವು ಭಕ್ತರು ಶುಚಿರ್ಭೂತರಾಗಿ ಅಂದು ಬೆಟ್ಟದ ತಪ್ಪಲಿನವರೆಗೆ ಹೊತ್ತೊಯ್ದು ಸಮರ್ಪಿಸುತ್ತಾರೆ. ತ್ರಿಕಾಲ ಪೂಜೆಯಲ್ಲಿ ಅಂದಿನ ಮಧ್ಯಾಹ್ನದ ಪೂಜೆಯು ಜಗುದ್ಗುರು ಮಹಾಸ್ವಾಮಿಗಳವರಿಂದ ಫಲಪಂಚಾಮೃತ ಮಹಾಭಿಷೇಕ ರುದ್ರಾಭಿಷೇಕ ಎಳನೀರು – ಕಬ್ಬಿನಹಾಲಿನ ಅಭಿಷೇಕಗಳೇ ಮೊದಲಾದವಿಗಳಿಂದ ಆ ಮಹಾದೇವ ಅರ್ಚಿತನಾಗುತ್ತಾನೆ. ಸಹಸ್ರಸಹಸ್ರ ಸಂಖ್ಯೆಯಲ್ಲಿ ಸುತ್ತಲ ಜನರು ಅಂದು ಬೆಟ್ಟದಲ್ಲಿ ಪರಮೇಶ್ವರನನ್ನು ದರ್ಶಿಸಿ ಸುಪ್ರೀತರಾಗುತ್ತಾರೆ.

 

ಚಂದ್ರಮೌಳೀಶ್ವರ ಪೂಜೆ

ಶಿವನಿಂದಲೇ ಅನುಗ್ರಹಿಸಲ್ಪಟ್ಟು ಶೃಂಗೇರಿ ಜಗದ್ಗುರುಪರಂಪರೆಯಲ್ಲಿ ಅರ್ಚಿಸಲ್ಪಡುತ್ತಿರುವ ತುಂಗಾನದಿಯ ಬಲತೀರದಲ್ಲಿ ನರಸಿಂಹವನವೆಂಬ ಗುರುನಿವಾಸದಲ್ಲಿ ಸ್ವರ್ಣಮಂಟಪದಲ್ಲಿ ವಿರಾಜಮಾನನಾದ ಸ್ಫಟಿಕಲಿಂಗರೂಪಿಯಾದ ಆ ಚಂದ್ರಮೌಳೀಶ್ವರನಿಗೆ ಅಂದು ರಾತ್ರಿಯ ನಾಲ್ಕು ಯಾಮಗಳಲ್ಲೂ ವಿಶೇಷವಾದ ಪೂಜೆಯನ್ನು ಜಗದ್ಗುರುಗಳೇ ನೆರವೇರಿಸುತ್ತಾರೆ. ಪ್ರತಿಯೊಂದು ಯಾಮದಲ್ಲೂ ಒಂದು ಏಕಾದಶಾವರ್ತನ ರುದ್ರಾಭಿಷೇಕವೂ , ಫಲಪಂಚಾಮೃತಾಭಿಷೇಕಗಳೂ ನೆಡೆಯುತ್ತದೆ. ದೇಶವಿದೇಶಗಳಲ್ಲಿರುವ ಭಕ್ತರು ಇಲ್ಲಿಗೆ ಈ ಪೂಜೆಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ.  ಪ್ರತಿಯಾಮದ ಪೂಜೆಗಳ ಮಧ್ಯದಲ್ಲಿ ಭಕ್ತರಿಗೆ ಕಷಾಯದ ವ್ಯವಸ್ಥೆಯನ್ನು ಶ್ರೀಮಠ ಮಾಡಿರುತ್ತದೆ. ಮಲ್ಲಪ್ಪನಬೆಟ್ಟದಲ್ಲೂ ನಾಲ್ಕುಯಾಮದ ಪೂಜೆ ನೆಡೆಯುತ್ತದೆ.

 

ಮಾಘ ಮಾಸದ ಅಮಾವಾಸ್ಯೆಯಂದು ಆ ಮಹೇಶ್ವರನ ರಥೋತ್ಸವವು ಶೃಂಗೇರಿಯ ರಾಜಬೀದಿಯಲ್ಲಿ ಆಗಮೋಕ್ತ ಕ್ರಮಾನುಸಾರವಾದ ಪೂರ್ವಾಪರ ವಿಧಿವಿಧಾನಗಳ ಸಹಿತವಾಗಿ ನೆಡೆಯುತ್ತದೆ. ಲೋಕಕಲ್ಯಾಣಾರ್ಥವಾಗಿ ಮಹಾದೇವನ ಸಂತೃಪ್ತಿಗಾಗಿ ಮಹಾರುದ್ರಯಾಗವು ನೆಡೆಯುತ್ತದೆ. ಈ ಯಾಗವು ಒಟ್ಟು ನಾಲ್ಕು ದಿನಗಳಕಾಲ ಸರಿಸುಮಾರು ನಲವತ್ತು ಜನ ಪುರೋಹಿತರಿಂದ ನೆಡೆಯುವ ಒಂದು ಪುರಶ್ಚರಣೆ. ಇದರ ಪೂರ್ಣಾಹುತಿಗೆ ಸಾಧಾರಣವಾಗಿ ಜಗದ್ಗುರುಗಳು ದಯಮಾಡಿಸುತ್ತಾರೆ.

ರುದ್ರ ( ನಮಕ) – ಚಮೆ ( ಚಮಕ) – ಪುರುಷಸೂಕ್ತ ಇವುಗಳನ್ನು ಪ್ರತಿನಿತ್ಯ ಹೇಳಬೇಕು. ಯಾರು ಈ ಮೂರನ್ನೂ ನಿತ್ಯ ನ್ಯಾಸಸಹಿತವಾಗಿ ಭಕ್ತಿಯಿಂದ ಧ್ಯಾನಿಸುತ್ತಾರೋ ಅವರು ಶಿವಲೋಕವನ್ನು ಮನೆಯ ಯಜಮಾನ ತನ್ನ ಮನೆಯನ್ನು ಸೇರುವಂತೆ ಸೇರುತ್ತಾರೆ. ಈ ಕೆಳಗಿನ ಶ್ಲೋಕ ಇದನ್ನೇ ಹೇಳುತ್ತದೆ.

ನಮಕಂ ಚಮಕಂ ಚೈವ ಪುರುಷಸೂಕ್ತಂ ತಥೈವ ಚ |ಪ್ರವಿಶೇತ್ ಸ ಮಹಾದೇವಂ ಗೃಹಂ ಗೃಹಪತಿರ್ಯಥಾ||

ಇವುಗಳ ಪಠನವು ಸರ್ವಪಾಪನಾಶಕ. ಭಕ್ತಿಪ್ರಿಯ  ಶಂಕರ ಸರ್ವಶಕ್ತ . ಆ ಪರಮೇಶ್ವರ ಅಷ್ಟೈಶ್ವರ್ಯಗಳನ್ನು ಅಭೀಷ್ಟಗಳನ್ನು ನೀಡುವ ಅಷ್ಟಮೂರ್ತಿ. ಶಬ್ದ- ಶಬ್ದಾರ್ಥಗಳು ಸದಾ ಒಟ್ಟಾಗಿರುವಂತಿರುವ ಪಾರ್ವತಿ ಪರಮೇಶ್ವರರು ಆದಿದಂಪತಿಗಳು. ನಮ್ಮ ಶೃಂಗೇರಿಯಲ್ಲಿ ಶಾರದಾ- ಚಂದ್ರಮೌಳೀಶ್ವರರ ರೂಪದಲ್ಲಿ , ಭವಾನಿ ಮಲಹಾನಿಕರೇಶ್ವರರ ರೂಪದಲ್ಲಿ ಆ ದಂಪತಿಗಳು ನೆಲೆಸಿದ್ದಾರೆ. ಅವರ ಕೃಪಾದೃಷ್ಟಿಯು ನಮಗೆ ನಿತ್ಯಸನ್ಮಂಗಲದಾಯಕವಾದದ್ದು. ಶೃಂಗೇರಿಗೆ ಬಂದು ದರ್ಶನ ಪಡೆದು ಕೃತಾರ್ಥರಾಗೋಣ ಸದ್ಭಕ್ತರಿಗೆ ಜಗದಾಧಾರಹೇತುಗಳಾದ ಆ ಉಮಾಮಹೇಶ್ವರರ ಮತ್ತು ಜಗದ್ಗುರುಗಳ ಪೂರ್ಣಾನುಗ್ರಹವಾಗಲಿ.. ಸರ್ವರಿಗೂ ಶಿವರಾತ್ರಿಯ ಶುಭಾಶಯಗಳು.

ಶ್ರೀ ತೇಜಶಂಕರ ಸೋಮಯಾಜಿ, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!