ಮಲಹಾನಿಕರೇಶ್ವರ ಸ್ವಾಮಿಗೆ ಇಂದು ಜಗದ್ಗುರು ಸನ್ನಿಧಾನಂಗಳವರಿಂದ ಸಹಸ್ರಕಮಲಾರ್ಚನೆ

ಶೃಂಗೇರಿ ಮಲಹಾನಿಕರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ದಮನಶಾರೋಪಣ
ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲಿ ಪುಟ್ಟ ಬೆಟ್ಟದ ಮೇಲಿರುವ ಪುರಾಣ ಪ್ರಸಿದ್ಧ ಮಲಹಾನಿಕರೇಶ್ವರ ಸ್ವಾಮಿಗೆ ಚಿತ್ರ ಪೂರ್ಣಿಮೆಯ ಈ ಸುದಿನ ದವನ ಪತ್ರವನ್ನು ಅರ್ಪಿಸುವ ಒಂದು ಪರ್ವದಿನ. ದವನ ಪತ್ರಕ್ಕೆ ದಮನ ಪತ್ರವೆಂದು ಕರೆಯವುದು ರೂಡಿ. ಹಾಗಾಗಿ ಈ ದಿನವನ್ನು ಇಲ್ಲಿ ದಮನಶಾರೋಪಣೊತ್ಸವ ಎಂದು ಕರೆಯಲಾಗುತ್ತದೆ.
ದವನ
ಇದು ಅತ್ಯಂತ ಪರಿಮಳಯುಕ್ತವಾದ ಪುಟ್ಟಗಿಡ. ಇದನ್ನು ‘ಹಬ್ಬದ ಹೂವು’ಎಂದೇ ಕರೆಯುತ್ತಾರೆ. ಜಾತ್ರೆಗಳಲ್ಲಿ, ದೇವರ ರಥೋತ್ಸವಗಳಲ್ಲಿ ಬಾಳೆಹಣ್ಣಿಗೆ ದವನ ಕಡ್ಡಿಯನ್ನು ಚುಚ್ಚಿ ರಥದ ಮೇಲಕ್ಕೆ ಎಸೆಯುತ್ತಾರೆ. ದವನದಲ್ಲಿ ಊರದವನ, ಕಾಡು ದವನ, ದವನ ಮಲ್ಲಿಗೆ ಮುಂತಾದ ಭೇದಗಳಿವೆಯೆಂದು ಹೇಳುತ್ತಾರೆ. ಚೈತ್ರ ಶುದ್ಧ ಹುಣ್ಣಿಮೆಯಂದು ಬಹಳ ರಥೋತ್ಸವಗಳು ಜರುಗುವುದರಿಂದ. ಆ ದಿನವನ್ನು ದವನದ ಹುಣ್ಣಿಮೆಯೆಂದೇ ಕರೆಯುತ್ತಾರೆ. ಅಂದು ದೇವರಿಗೆ ದವನದ ಪೂಜೆ ಬಹಳ ಪ್ರಶಸ್ತವಾದುದು. ಚೈತ್ರ ಶುದ್ಧ ಬಿದಿಗೆಯಂದು ಶಿವಗೌರಿಯರನ್ನು, ಷಷ್ಠಿಯಂದು ಸ್ಕಂದನ ಪೂಜೆಯನ್ನು, ಚತುರ್ದಶಿಯಂದು ಶಿವನನ್ನು, ಪಂಚಮಿಯಲ್ಲಿ ಅನಂತನಾಗನನ್ನು, ಸಪ್ತಮಿಯಲ್ಲಿ ಸೂರ್ಯನನ್ನು, ನವಮಿಯಂದು ದೇವಿಯನ್ನು ಪೂಜಿಸುವಾಗ ದವನವನ್ನು ವಿಶೇಷವಾಗಿ ಬಳಸುತ್ತಾರೆ. ವಸಂತದಲ್ಲಿ ದವನ ಚಿಗುರಿ ಹೊಸದಾದ ಪರಿಮಳದಿಂದ ಕೂಡಿರುವುದು ಇದಕ್ಕೆ ಕಾರಣವಿರಬಹುದು. ದಮನಶಾರೋಪಣವು ಶಿವನಿಗಂತೂ ಅತಿಪ್ರಿಯವೆನ್ನಲಾಗಿದೆ.
ಅಡು ಭಾಷೆಯಲ್ಲಿ ಇದನ್ನು ಜವನವೆಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಇದಕ್ಕೆ ಅಜಜಟಿ, ಋಷಿಪುತ್ರಿ, ದಮನ ಮತ್ತು ದಮನಕವೆಂಬ ಹೆಸರುಗಳು ಕಂಡುಬರುತ್ತದೆ. ಕಾಡಿನ ವಾತಾವರಣದಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತಿದ್ದಿರಬಹುದು. ಆಯುರ್ವೇದ ದಲ್ಲಿಯೂ ದವನ ಪತ್ರೆಯನ್ನು – ಶೀತ ಸಂಬಂಧಿ ಕಾಯಿಲೆಗಳಿಗೆ ಉಪಯುಕ್ತ ಎಂದು ಕರೆಯುತ್ತಾರೆ.
ಈ ಬಾರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ದಿವ್ಯಕರದಿಂದ ಸಹಸ್ರ ಕಮಲದ ಅರ್ಚನೆ 11:30 – 12:30 ರ ಸಮಯದಲ್ಲಿ ನೆರವೇರಲಿದೆ.
ಶೃಂಗೇರಿ ಎಂದು ಹೆಸರು ಬರಲು ಕಾರಣೀಭೂತರಾದ ಋಷ್ಯಶೃಂಗ ಮುನಿಯ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಪಗೈದು ನಂತರ ತಾವು ಅರ್ಚಿಸಿದ ಮಲಹಾನಿಕರೇಶ್ವರ ಲಿಂಗದಲ್ಲೇ ಐಕ್ಯರಾದ ಪರಮ ಪವಿತ್ರ ಕ್ಷೇತ್ರ ಇದಾಗಿದೆ.
ವಿಶೇಷ ಸಂಧರ್ಭಗಳಲ್ಲಿ ಜಗದ್ಗುರು ಮಹಾಸ್ವಾಮಿಗಳೇ ಸ್ವತಃ ಪೂಜೆಗೈಯುವ ಅಪರೂಪದ ದೇಗುಲ.ಸ್ತಂಭ ಗಣಪತಿ, ಭವಾನಿ ಅಮ್ಮನವರು ಸೇರಿದಂತೆ ಸಕಲಪರಿವಾರಯುಕ್ತನಾಗಿ ಇಲ್ಲಿ ಈಶ್ವರ ವಿರಾಜಮಾನನಾಗಿದ್ದಾನೆ.
– ವಿಶ್ವಾಸ್. ಎಸ್. ಭಟ್ , ಶೃಂಗೇರಿ