Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಡಾ.ರಾಜ್ ರವರ ಮನಸ್ಸಿನಿಂದ ಪ್ರಕಟಗೊಂಡ ಭಕ್ತಿಗೀತೆ – ವಿಶ್ವಾಸ್.ಎಸ್.ಭಟ್

Published

on

ಅಣ್ಣವರು ಅನುಭವದ ವರ್ಣಿಸಿದ ಸಾಲಿಗೆ ಹಾಡಿನ ರೂಪ ಕೊಟ್ಟವರು ಚಿ.ಉದಯಶಂಕರ್

ಹೌದು ಡಾ.ರಾಜ್‌ಕುಮಾರ್‌ ಈ ಹೆಸರು ಕೇಳಿದೊಡನೆ ಕನ್ನಡಿಗನಲ್ಲಿ ಸ್ಪೂರ್ತಿಯ ಮಿಂಚುತಾಗಿ ರೋಮಾಂಚನವಾಗುತ್ತದೆ. ನಟಸಾರ್ವಭೌಮ-ಗಾನಕೋಗಿಲೆ ಎಂಬ ಉಪಮೇಯ ಪಡೆದ ನಮ್ಮ ಅಣ್ಣಾವ್ರು
ಅದ್ಭುತ ಗಾಯಕರು ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಅವರು ಗೀತರಚನೆಯನ್ನು ಮಾಡಿದ್ದಾರೆ.! ಹೌದು, ಡಾ.ರಾಜ್‌ಕುಮಾರ್‌ ನೂರಾರು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಹಾಗೆಯೇ ಅದ್ಭುತವಾದ ಒಂದು ಭಕ್ತಿಗೀತೆ ಅವರಿಂದಲೇ ರಚನೆಯಾಗಿದೆ. ಅದು ನಮ್ಮ ವಿದ್ಯಾಧಿದೇವತೆ ಶೃಂಗೇರಿ ಶಾರದೆಯದ್ದಾಗಿರುವುದು ವಿಶೇಷ.
ಶೃಂಗಗಿರಿಯ ಭಕ್ತರ ಮನಸ್ಸಿನ ಪುಟದಲ್ಲಿ ಆಗಾಗ ಸಾತ್ವಿಕ ಕಂಪನವನ್ನು ಉಂಟುಮಾಡುತ್ತಿರುವ ‘ಎಂತ ಅಂದ ಎಂತ ಚೆಂದ ಶಾರದಮ್ಮ, ನಿನ್ನ ನೋಡಲೆರೆಡು ಕಣ್ಣು ನನಗೆ ಸಾಲದಮ್ಮಾ…’

ಹೌದು ಇದು ರಾಜ್‌ಕುಮಾರ್‌ ರವರ ಮನಸ್ಸಿನಿಂದ ಪ್ರಕಟವಾದ ಭಕ್ತಿಗೀತೆ. ಬರೆದಿದ್ದು ಮಾತ್ರ ಗೀತ ಸಾಹಿತಿ ಚಿ.ಉದಯಶಂಕರ್‌.

ಹಾಗಾದರೆ, ಈ ಭಕ್ತಿಗೀತೆ ರಚಿತವಾಗಿದ್ದು ಹೇಗೆ?

ಒಮ್ಮೆ ಡಾ.ರಾಜ್‌ಕುಮಾರ್‌ ಅವರು ಕುಟುಂಬ ಸಮೇತ ಶ್ರೀಕ್ಷೇತ್ರ ಶೃಂಗೇರಿಗೆ ಹೋಗಿದ್ದರಂತೆ. ಅಲ್ಲಿ ವರದೇವತೆ ಶಾರದೆಗೆ ಪೂಜೆಸಲ್ಲಿಸಿದ ನಂತರ ಡಾ.ರಾಜ್‌ಕುಮಾರ್‌ ಕುಟುಂಬ ಅಂದಿನ ಶಾರದಾಪೀಠದ ಅಧಿಪತಿಗಳಾಗಿದ್ದ ಜಗದ್ಗುರು ಶ್ರೀಮದಭಿನವವಿದ್ಯಾತೀರ್ಥ ಮಹಾಸ್ವಾಮಿಗಳ ಶ್ರೀಗಳು ದರ್ಶನಕ್ಕೆ ಹೋದ ಸುಸಂದರ್ಭದಲ್ಲಿ ಮಹಾಸ್ವಾಮಿಗಳು, ರಾಜ್‌ಕುಮಾರ್‌ ಅವರಿಗೆ, ‘ನೀವು ಎಲ್ಲಾ ದೇವರ ಮೇಲೂ ಹಾಡನ್ನು ಹಾಡಿದ್ದೀರಿ, ನಮ್ಮ ಶಾರದೆಯ ಮೇಲೊಂದು ಹಾಡನ್ನು ಹಾಡಿ’ ಎಂದು ಹೇಳಿ ಹರಸಿಕಳಿಸಿದ್ದರಂತೆ ಆಗ ರಾಜ್‌ಕುಮಾರ್‌ ಅಲ್ಲಿಂದ ಬೆಂಗಳೂರಿಗೆ ಬಂದವರೆ, ಚಿ.ಉದಯಶಂಕರ್‌ ಅವರನ್ನು ಕರೆಸಿ, ‘ಶೃಂಗೇರಿ ಶಾರದಾಂಬೆ ಮೇಲೊಂದು ಹಾಡು ಬರೀರಿ. ನಾನು ಆ ಹಾಡನ್ನು ಹಾಡ್ತೀನಿ. ನೀವು ಒಮ್ಮೆ ಶೃಂಗೇರಿಗೆ ಹೋಗಿ ಆ ದೇವಿಯನ್ನು ನೋಡಿಕೊಂಡು ಬನ್ನಿ, ಆಗ ಶಾರದಮ್ಮ ಮೇಲೆ ಹಾಡು ಬರೆಯೋಕೆ ಸುಲಭವಾಗುತ್ತೆ’ ಅಂದರಂತೆ ರಾಜ್‌ಕುಮಾರ್‌. ಆಗ ಚಿ.ಉದಯ ಶಂಕರ್‌, ‘ನೀವು ಆ ಶಾರದಾಂಬೆಯ ದರ್ಶನ ಮಾಡಿ ಬಂದಿದ್ದೀರಿ. ನೀವೇ ಬರೆದುಬಿಡಿ’ ಅಂದರಂತೆ. ಅದಕ್ಕೆ ರಾಜ್‌ಕುಮಾರ್‌, ‘ಅಯ್ಯೋ, ನಾನೇನಿದ್ದರೂ ಹಾಡ್ತೀನಿ’ ಅಷ್ಟೇ ಅಂದಾಗ, ‘ಹೋಗಲಿ ನೀವು ದರ್ಶನ ಮಾಡಿದಾಗ ಆ ಶಾರದಾಂಬೆ ಹೇಗೆ ಕಾಣಿಸಿಕೊಂಡಳು ಎಂಬುದನ್ನು ಹೇಳಿ ನೋಡೋಣ’ ಅಂತ ಉದಯಶಂಕರ್‌ ಪೆನ್ನು, ಹಾಳೆ ಹಿಡಿದುಕೊಂಡರಂತೆ.

ರಾಜ್‌ಕುಮಾರ್‌, ‘ಆ ಶಾರದೆ ನೋಡೋಕೆ ಎಷ್ಟು ಅಂದವಾಗಿದ್ದಾಳೆ’ ಅಂದಾಗ, ಉದಯ್‌ಶಂಕರ್‌ ‘ಎಂತ ಅಂದ ಎಂತ ಚೆಂದ ಶಾರದಮ್ಮ’ ಎಂದು ಬರೆದರಂತೆ. ಆಮೇಲೆ ಹೇಳಿ ಅಂತ ರಾಜ್‌ಕುಮಾರ್‌ ಅವರನ್ನು ಕೇಳಿದಾಗ, ರಾಜ್‌ ಮತ್ತೆ, ‘ಆಕೆಯನ್ನು ನೋಡೋಕೆ ಈ ಎರಡು ಕಣ್ಣು ಸಾಕಾಗಲ್ಲ’ ಅಂದಿದ್ದಾರೆ, ಆಗ ‘ನಿನ್ನ ನೋಡಲೆರೆಡು ಕಣ್ಣು ನನಗೆ ಸಾಲದಮ್ಮಾ…’ ಎಂಬ ಪದಬಳಸಿ ಬರೆದರಂತೆ ಉದಯಶಂಕರ್‌. ‘ಎಷ್ಟು ನೋಡಿದರೂ ನೋಡ್ತಾನೇ ಇರಬೇಕು ಅನಿಸುತ್ತೆ’ ಎಂಬ ರಾಜ್‌ಕುಮಾರ್‌ ಮಾತಿಗೆ ‘ಇನ್ನು ಇನ್ನು ನೋಡುವಾಸೆ ತುಂಬಿತಮ್ಮ, ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮಾ …’ ಎಂದು ಬರೆದರಂತೆ. ರಾಜ್‌ಕುಮಾರ್‌ ಅವರು ದೇವಿಯನ್ನು ವರ್ಣಿಸುತ್ತಿ ರುವಂತೆಯೇ ಪೂರ್ಣ ಗೀತೆಯನ್ನು ಬರೆದು ರಾಜ್‌ಕುಮಾರ್‌ ಅವರಿಗೆ ಹೇಳಿ, ಅವರಿಂದಲೇ ಹಾಡನ್ನು ಹಾಡಿಸಿದರಂತೆ ಉದಯಶಂಕರ್‌.
ಈಗಲೂ ಈ ಹಾಡು ಜನರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸುತ್ತಿದೆ.

ಸಾಂದರ್ಭಿಕ ಚಿತ್ರ – 1987ರಲ್ಲಿ ಶ್ರೀಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥರ 71 ನೆಯ ವರ್ಧಂತಿಯ ಸುಸಂದರ್ಭದಲ್ಲಿ ಮಹಾಸ್ವಾಮಿಗಳ ಆಶಿರ್ವಾದ ಪಡೆಯುತ್ತಿರುವ ಡಾ.ರಾಜ್

ಈ ಗೀತೆಯ ಪೂರ್ಣಪಾಠ

ಎಂಥ ಅಂದ ಎಂಥ ಚಂದ ಶಾರದಮ್ಮ
ನಿನ್ನ ನೋಡಲೆರಡು ಕಣ್ಣುನನಗೆ ಸಾಲದಮ್ಮ
ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನ್ಮ ಬರಲಿ ನನಗೆ ಸಾಲದಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
ಎಂಥ ಶಕ್ತಿ ನಿನ್ನಲಿದೆಯೊ ಶಾರದಮ್ಮ
ನಿನ್ನ ನೋಡಿ ಹಾಡೊ ಆಸೆ ಬಂದಿತಮ್ಮ
ರತ್ನದಂತಹ ಮಾತುಗಳನೆ ಆಡಿಸಮ್ಮ
ರಾಗಭಾವ ಶಕ್ತಿ ತುಂಬಿ ಹಾಡಿಸಮ್ಮ
ಅಲ್ಲಿ ಇಲ್ಲಿ ಓಡೋ ಮನಸ್ಸು ನನ್ನದಮ್ಮ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ
ಬೇರೆ ಏನು ಬೇಕು ಎಂದು ಕೇಳೆನಮ್ಮ
ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ.
ಎಂಥ ಅಂದ ಎಂಥ ಚಂದ ಶಾರದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ..

ಈ ಭಕ್ತಿಗೀತೆಯ ರಚನೆ ಹಿಂದಿನ ರೋಚಕತೆಯೊಂದಿಗೆ ಶಾರದೆಯ ಪಾದಕ್ಕೊಂದು ಸಾಷ್ಟಾಂಗವೇರಗುತ್ತಾ..

 

– ವಿಶ್ವಾಸ್‌‌. ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!