Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಮಹಿಮಾನ್ವಿತ ನಾರಸಿಂಹ ಕ್ಷೇತ್ರ- ಶೀಬಿ – ಟಿ.ಎಂ.ಸತೀಶ್

Published

on

ಮಹಿಮಾನ್ವಿತ ನಾರಸಿಂಹ ಕ್ಷೇತ್ರ-ಶೀಬಿ

ಶಿಬಿ ತಪವನ್ನಾಚರಿಸಿ, ಹಿರಣ್ಯ ಕಶಿಪುವನ್ನು ಕೊಂದ ನರಸಿಂಹನ ಕೋಪ ಶಾಂತಗೊಳಿಸಿದ ಪುಣ್ಯ ಕ್ಷೇತ್ರವೇ ಶೀಬಿ.

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ನಾರಸಿಂಹ ಅಥವಾ ನರಸಿಂಹಾವತಾರ ಅತ್ಯಂತ ಮಹತ್ವವಾದ್ದು. ನರಸಿಂಹನನ್ನು ಉಗ್ರ ನರಸಿಂಹ, ಲಕ್ಷ್ಮೀ ನರಸಿಂಹ, ಯೋಗಾ ನರಸಿಂಹ ಹೀಗೆ ನಾನಾ ಹೆಸರುಗಳಿಂದ ಪೂಜಿಸುತ್ತಾರೆ. ಕರ್ನಾಟಕದಲ್ಲಿ ಹಲವಾರು ನಾರಸಿಂಹ ಕ್ಷೇತ್ರಗಳಿವೆ. ಇವುಗಳಲ್ಲಿ ಪ್ರಮುಖ ಹಾಗೂ ಮಹಿಮಾನ್ವಿತ ಕ್ಷೇತ್ರಗಳಲ್ಲಿ ಶೀಬಿಯೂ ಒಂದು.

ಮಂಗಳೂರಿನ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ವಿಸ್ಮಯ

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತುಮಕೂರಿನಿಂದ 24 ಕಿಲೋ ಮೀಟರ್ ದೂರದಲ್ಲಿ, ಹೆದ್ದಾರಿಯ ಅಂಚಿನಲ್ಲೇ ಇರುವ ಪುರಾತನ ಕ್ಷೇತ್ರವೇ ಶೀಬಿ. ಶಿಬಿ ಎಂಬ ಮಹಾ ಮುನಿ ಈ ಕ್ಷೇತ್ರದಲ್ಲಿ ದೀರ್ಘ ತಪವನ್ನಾಚರಿಸಿದ್ದರಂತೆ ಹೀಗಾಗಿ ಶಿಬಿ ನೆಲೆಸಿದ್ದ ಈ ಕ್ಷೇತ್ರ ಶೀಬಿ ಎಂದೇ ಹೆಸರು ಪಡೆದಿದೆ ಎಂಬುದು ಐತಿಹ್ಯ.

ಲೋಕ ಕಂಟಕನಾಗಿ ಮೆರೆಯುತ್ತಿದ್ದ, ದೇವಾನು ದೇವತೆಗಳ ಆದಿಯಾಗಿ ಮೂರು ಲೋಕಗಳನ್ನೂ ಕಾಡುತ್ತಿದ್ದು ರಕ್ಕಸ ಹಿರಣ್ಯ ಕಶಿಪುವನ್ನು ಸಂಹಾರ ಮಾಡಲು ಭಕ್ತ ಪ್ರಹ್ಲಾದ ತೋರಿದ ಕಂಬ ಸೀಳಿ ಹೊರಬಂದ ಉಗ್ರನರಸಿಂಹ ತನ್ನ ಎರಡು ಕೈಗಳಲ್ಲಿ ಹಿರಣ್ಯ ಕಶಿಪುವನ್ನು ಎತ್ತಿಕೊಂಡು ಹೋಗಿ, ಹೊಸ್ತಿಲ ಮೇಲೆ ಕುಳಿತು, ಇನ್ನೆರೆಡು ಕೈಗಳಿಂದ ಹಿರಣ್ಯ ಕಶಿಪು ಹೊಟ್ಟೆಯನ್ನು ಬಗೆದು, ಮಗದೆರಡು ಕೈಗಳಿಂದ ಅವನ ಕರುಳನ್ನು ಮಾಲೆ ಹಾಕಿಕೊಂಡರೂ ಕೋಪ ಶಮನವಾಗದೆ ಉಗ್ರನಾಗಿದ್ದಾಗ, ಪ್ರಹ್ಲಾದರಾದಿಯಾಗಿ ಎಲ್ಲರೂ ಶಾಂತನಾಗೋ ನರಸಿಂಹ ಎಂದು ಬೇಡಿದರೂ ಉಗ್ರ ಸ್ವರೂಪದಲ್ಲೇ ನಿಂತಿದ್ದ ನರಸಿಂಹನನ್ನು ಹೇಗಾದರೂ ಶಾಂತಗೊಳಿಸಲೇಬೇಕು ಇಲ್ಲ, ಜಗತ್ತೇ ಉಳಿಯದು ಎಂದು ಹೆದರಿ, ಎಲ್ಲ ದೇವತೆಗಳೂ ಶೀಬಿ ಮುನಿಯ ಬಳಿ ಬಂದು ವಿಷ್ಣು ಭಕ್ತನಾದ ನರಸಿಂಹನ ಕೋಪ ಶಮನ ಮಾಡುವಂತೆ ಕೋರಿದರಂತೆ. ಆಗ ಶೀಬಿ ಮಹಾಮುನಿ ನರಸಿಂಹನ ಪ್ರಾರ್ಥಿಸಿ, ಪೂಜಿಸಿ, ಸ್ತುತಿಸಿದನಂತೆ, ಶಿಬಿ ಮಹಾಮುನಿಯ ಭಕ್ತಿಗೆ ಕರಗಿದ ಉಗ್ರ ನರಸಿಂಹ ಶಾಂತನಾದನಂತೆ. ಬಳಿಕ ಶಿಬಿ ಮಹಾ ಮುನಿಯ ಪ್ರಾರ್ಥನೆಯಂತೆ ಲಕ್ಷ್ಮೀಸಹಿತನಾಗಿ ಸಾಲಿಗ್ರಾಮಶಿಲೆಯಾಗಿ ನಾರಸಿಂಹ ಈ ಕ್ಷೇತ್ರದಲ್ಲಿ ನೆಲೆಸಿದನೆಂದು ಸ್ಥಳಪುರಾಣ ಹೇಳುತ್ತದೆ.

ಯುಗಗಳು ಉರುಳಿದ ಪರಿಣಾಮ, ಈ ಕ್ಷೇತ್ರ ಗಿಡಗಂಟೆ ಬೆಳೆದು ಕಾಡಾಗಿ ಹೋಗಿತ್ತು. ಕಲಿಯುಗದಲ್ಲಿ ಒಂದು ದಿನ ಸಿರಾದ ಅಮರಯ್ಯ ಎಂಬ ಅಡಿಕೆ ವ್ಯಾಪಾರಿಯೊಬ್ಬರು, ವ್ಯಾಪಾರಕ್ಕೆ ತೆರಳಿದ್ದಾಗ, ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು, ಇಲ್ಲಿ ಬಿಡಾರ ಹೂಡಿ, ತಮ್ಮ ಸಹಚರರಿಗೆ ಅಲ್ಲಿಯೇ ಇದ್ದ ಬಂಡೆಯ ಮೇಲೆ ಅಡುಗೆ ಮಾಡಲು ಹೇಳಿ, ತಾವು ಮೊಸರು ತರಲು ಸಮೀಪದಲ್ಲೇ ಇದ್ದ ಗ್ರಾಮಕ್ಕೆ ಹೋದರಂತೆ, ಮತ್ತೆ ಬಂದು ನೋಡಿದಾಗ ಎಲ್ಲರೂ ಮೂರ್ಛೆಹೋಗಿ ಬಿದ್ದಿರುವುದನ್ನು ನೋಡಿ ಗಾಬರಿಗೊಂಡರು. ಜೊತೆಗೆ ಅವರ ಸಹಚರರು ಮಾಡಿದ್ದ ಅಡುಗೆ ಎಲ್ಲ ರಕ್ತಮಯವಾಗಿತ್ತಂತೆ. ಈ ಬೀಭತ್ಸ ನೋಟ ನೋಡಿ ಹೆಸರಿ ಅವರೂ ಕುಸಿದರಂತೆ. ಅವರಿಗೆ ನಾರಸಿಂಹ ಕನಸಿನಲ್ಲಿ ಕಾಣಿಸಿಕೊಂಡು, ನಿಮ್ಮೆಲ್ಲರಿಂದ ಅರಿಯದೇ ಲೋಪವಾಗಿದೆ. ನಿನ್ನ ಸಹಚರರು ನಾನು ನೆಲೆಸಿಹ ಸಾಲಿಗ್ರಾಮ ಶಿಲೆಯ ಮೇಲೆ ಅಡುಗೆ ಮಾಡಿ, ನನಗೆ ಬೆಂಕಿ ತಾಕಿಸಿ ನನ್ನ ಕೋಪಕ್ಕೆ ಗುರಿಯಾಗಿದ್ದಾರೆ. ನೀನು ತಪ್ಪು ಕಾಣಿಕೆ ಸಲ್ಲಿಸಿ, ಇಲ್ಲಿ ನನಗೊಂದು ದೇವಾಲಯ ಕಟ್ಟು ಎಂದು ಹೇಳಿ ಅದೃಶ್ಯನಾದನಂತೆ.

ಕನಕಧಾರಾ ಸ್ತೋತ್ರದ ವಿಶೇಷ – ಹಿನ್ನೆಲೆ, ವಿವರಣೆ ಸಹಿತ – ದೀಪಕ್

ಆಗ ಅಮರಯ್ಯ ಪಕ್ಕದ ಗ್ರಾಮಕ್ಕೆ ತೆರಳಿ ಊರಿನವರಿಗೆ ವಿಚಾರ ತಿಳಿಸಿ, ಎಲ್ಲರನ್ನೂ ಕರೆದುಕೊಂಡು ಬಂದು, ಅಲ್ಲಿ ನಡೆದಿದ್ದ ಎಲ್ಲ ದೃಶ್ಯ ತೋರಿಸಿ, ಮೂರ್ಛೆ ಹೋಗಿದ್ದ ಎಲ್ಲರಿಗೂ ನೀರು ಆರೈಕೆ ಮಾಡಿ ಅವರಿಗೆ ಜ್ಞಾನ ಬಂದ ಬಳಿಕ, ಅವರಿಗೂ ತಮ್ಮ ಕನಸಿನ ವಿಚಾರ ತಿಳಿಸಿದರಂತೆ. ಆಗ ಎಲ್ಲ ವ್ಯಾಪಾರಿಗಳೂ ಗ್ರಾಮಸ್ಥರೂ ಸೇರಿ, ಅಲ್ಲಿ ದೇವಾಲಯ ಕಟ್ಟಿಸಿ ಪೂಜಿಸಿದರಂತೆ. ಈ ಸ್ಥಳದ ಮಹಿಮೆ ಕೇಳಿದ ಅಂದಿನ ಮೈಸೂರು ಮಹಾರಾಜರು ದೇವಾಲಯಕ್ಕೆ ಭೇಟಿ ನೀಡಿ, ನರಸಿಂಹನ ಪೂಜಿಸಿ, ಕಾಣಿಕೆ ಅರ್ಪಿಸದರಂತೆ.

1799ರಲ್ಲಿ ಕಾರಣಿಕ ನಲ್ಲಪ್ಪ ಎಂಬುವವರು ಹಳೆಯ ದೇವಾಲಯವಿದ್ದ ಜಾಗದಲ್ಲಿ ಈಗಿರುವ ಭವ್ಯ ದೇವಾಲಯ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ಸುಂದರ ದೇವಾಲಯದ ಭಿತ್ತಿಯಲ್ಲಿ ರಚಿಸಲಾಗಿರುವ ಸುವರ್ಣ ಲೇಪಿತ ವರ್ಣ ಚಿತ್ರಗಳು ನಯನ ಮನೋಹರವಾಗಿವೆ. ಪ್ರಧಾನ ಗರ್ಭಗೃಹದಲ್ಲಿ ಸಾಲಿಗ್ರಾಮ ರೂಪಿಯಾದ ನಾರಸಿಂಹ ದೇವರನ್ನು ಕಾಣಬಹುದು. ಎಡಬಲದಲ್ಲಿ ಲೋಕಾಂಬ ಮತ್ತು ಚೆಂಚುಮಾಂಬರ ದೇವಾಲಯಗಳಿವೆ.

ಇನ್ನು ತುಮಕೂರು ಹರಿಹರ ಕ್ಷೇತ್ರ ಎಂದೇ ಖ್ಯಾತಿ. ಇಲ್ಲಿ ಹರಿ-ಹರರಿಗೆ ಯಾವುದೇ ಭೇದ ಇಲ್ಲ. ಹೀಗಾಗಿ ಈ ದೇವಾಲಯದಲ್ಲಿ ಶಿವನೂ ನೆಲೆಸಿದ್ದಾನೆ. ಇಲ್ಲಿರುವ ಶಿವಲಿಂಗದಲ್ಲೂ ಒಂದು ವೈಶಿಷ್ಟ್ಯ ಇದೆ. ಲಿಂಗ ಅರ್ಧ ಕಪ್ಪು, ಅರ್ಧ ಕೇಸರಿಬಣ್ಣದ ಶಿಲೆಯದಾಗಿರುವುದು ವಿಶೇಷ., ಇದನ್ನು ಅರ್ಧನಾರೀಶ್ವರ, ಚಂದ್ರಮೌಳೇಶ್ವರ ಎಂದು ಕರೆಯುತ್ತಾರೆ.

ಪ್ರತಿವರ್ಷ ಮಾಘ ಮಾಸದ ರಥಸಪ್ತಮಿಯ ಬಳಿಕ ಬರುವ ಪುಬ್ಬಾ ನಕ್ಷತ್ರದಲ್ಲಿ ಇಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.

ವಿಶಾಲವಾದ ಪ್ರಾಕಾರದಲ್ಲಿ ಹಲವು ಆಲದ ಎಲೆಯ ಮೇಲೆ ಮಲಗಿರುವ ಕೃಷ್ಣ, ವೇಣುಗೋಪಾಲ, ರಂಗನಾಥಸ್ವಾಮಿಯೇ ಮೊದಲಾದ ದೇವಾನು ದೇವತೆಗಳ ವಿಗ್ರಹಗಳು ಹಾಗೂ ಗರುಡವಾಹನ ಸೇರಿದಂತೆ ವಿವಿಧ ವಾಹನಗಳೂ ಇವೆ.

*ಲೇಖಕರು- ಟಿ.ಎಂ.ಸತೀಶ್, ಸಂಪಾದಕರು, ourtemples.in

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!