Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಶ್ರೀ ಅನಂತ ಪದ್ಮನಾಭ Sri Anantha Padmanabha

Published

on

ಕನ್ನಡ1 of 2
To Change Language, Click ← → (arrow) Button

 

ಭೋಗೀಂದ್ರ ಶಾಯಿನಂ… ಕುರುಕುಶಲದಾಯಿನಂ….!

ಶ್ರೀ ಅನಂತಪದ್ಮನಾಭ

ಮಹಾವಿಷ್ಣುವಿನ ಅತ್ಯಮೊಘವಾದ ಸ್ವರೂಪವೇ ಶ್ರೀ ಅನಂತ ಪದ್ಮನಾಭ ಮೂರ್ತಿ ಮತ್ತು ಈ ಅನಂತನ ಆವಾಸ ಸ್ಥಾನವೂ, ತ್ರಿಮೂರ್ತಿಗಳು ಒಂದೇ ಗರ್ಭಗೃಹದಲ್ಲಿ ದರ್ಶನ ಕೊಡುವ ಅತಿ ಅಪರೂಪದ ಕ್ಷೇತ್ರವೂ ಅನಂತಶಯನವೆಂದು ಐತಿಹಾಸಿಕವಾಗಿ ಪ್ರಸಿದ್ದವಾದದ್ದು ಈ ತಿರುವನಂತಪುರ ಕ್ಷೇತ್ರ

ಇಲ್ಲಿನ ವಿಶೇಷತೆ, ಶಯನಭಂಗಿಯಲ್ಲಿರುವ ಅನಂತನನ್ನು ಮೂರು ಬಾಗಿಲುಗಳಲ್ಲಿ ದರ್ಶಿಸಬೇಕು.
ಮೊದಲ ಬಾಗಿಲಲ್ಲಿ ಅನಂತನ ಸುಂದರ ಮುಖಾರವಿಂದದ ಜೊತೆ ಶಿವಲಿಂಗದ ದರ್ಶನ. ಅನಂತನು ಎರಡೂ ಕರಗಳಲ್ಲಿ ಕಮಲ ಪುಷ್ಪಗಳನ್ನು ಹಿಡಿದಿದ್ದಾನೆ, ಬಲಗೈಯಲ್ಲಿನ ಪುಷ್ಪವನ್ನು ಶಿವಲಿಂಗಕ್ಕೆ ಅರ್ಪಿಸುತ್ತಾ ಎಡಗೈಯಲ್ಲಿನ ಪುಷ್ಪದ ಸುವಾಸನೆಯನ್ನು ಆಘ್ರಾಣಿಸುತ್ತಾ ಆದಿಶೇಷನ ಮೇಲೆ ಪವಡಿಸಿದ್ದಾನೆ.
ಎರಡನೇ ಬಾಗಿಲಲ್ಲಿ ಅನಂತನ ನಾಭಿಯಿಂದಾವಿರ್ಭವಿಸಿದ ಕಮಲದಲ್ಲಿ ಚತುರ್ಮುಖ ಬ್ರಹ್ಮನ ದರ್ಶನ.
ಮೂರನೇ ದ್ವಾರದಿಂದ ಅನಂತನ ಪಾದಕಮಲಗಳ ದರ್ಶನ.

ಇನ್ನೊಂದು ಸ್ವಾರಸ್ಯಕರ ಮಹಿತಿಯೇನೆಂದರೆ ಅನಂತನ ಮೂಲಸ್ಥಾನವಿರುವುದು ನಮ್ಮ ತುಳುನಾಡಿನಲ್ಲಿ…!
ತುಳುವರಾದ ಶ್ರೀ ದಿವಾಕರ ಮುನಿ ಎಂಬ ಸಂನ್ಯಾಸಿಗಳು ಕಾಸರಗೋಡಿನ ಅನಂತಪುರ ಕ್ಷೇತ್ರದಲ್ಲಿ ಮಹಾವಿಷ್ಣುವಿನ ಆರಾಧನೆಯನ್ನು ಸತತವಾಗಿ ಅತ್ಯಂತ ಭಕ್ತಿಯಿಂದ ನಡೆಸುತ್ತಿರುತ್ತಾರೆ. ಭಗವಂತನು ಒಬ್ಬ ಬಾಲಕನ ರೂಪದಿಂದ ಅಲ್ಲಿಗೆ ಬಂದು ಅವರೊಟ್ಟಿಗೆ ವಾಸ ಮಾಡುತ್ತಿರುತ್ತಾನೆ. ಆ ತೇಜಸ್ವೀ ಬಾಲಕನು ಒಮ್ಮೆ ಮುನಿಗಳು ಪೂಜಿಸುತ್ತಿದ್ದ ಸಾಲಿಗ್ರಾಮವನ್ನು ಬಾಯಿಗೆ ಹಾಕಿಕೊಂಡು, ‘ನನ್ನನ್ನು ನೋಡುವುದಾದರೆ ಅನಂತನಕಾಡಿಗೆ ಬಾ’ ಎಂದು ಹೇಳಿ ಅಲ್ಲಿಂದ ಓಡಲು ಶುರುಮಾಡುತ್ತಾನೆ.
ಅವನನ್ನು ಹಿಂಬಾಲಿಸಿಕೊಂಡು ಬರುವ ಮುನಿಗಳು, ಸಮುದ್ರತೀರದ ಕಾಡಿನ ಪ್ರದೇಶದಲ್ಲಿ ಆ ಬಾಲಕನು ಒಂದು ಮರದಲ್ಲಿ ಅದೃಶ್ಯನಾದದ್ದು ನೋಡುತ್ತಾರೆ. ತತ್ಕ್ಷಣವೇ ಆ ಹೆಮ್ಮರವು ಬಿದ್ದು ಅತ್ಯಂತ ದೊಡ್ಡ ಮಹಾವಿಷ್ಣುವಿನ ಸ್ವರೂಪವನ್ನು ತಾಳುತ್ತದೆ.
ಮುನಿಗಳು ಅದರ ಸಂಪೂರ್ಣ ರೂಪವನ್ನು ಕಾಣಲಾರದೇ ವಿನಂತಿಸಿಕೊಂಡಾಗ, ಸಂನ್ಯಾಸಿಗಳ ದಂಡದ ಮೂರು ಪಟ್ಟಷ್ಟು ಚಿಕ್ಕದಾಗುತ್ತದೆ.
ಆಗ ಅವರು ತೆಂಗಿನ ಕರಟದಲ್ಲಿ ನೈವೇದ್ಯವನ್ನು ಅರ್ಪಿಸಿ ಪೂಜಿಸುತ್ತಾರೆ.
ಇಲ್ಲಿ ಇಂದಿಗೂ ಸಹ ದೇವರಿಗೆ ಕರಟದಲ್ಲಿ ನೈವೇದ್ಯ ಅರ್ಪಿಸುವ ರೂಢಿ ಇದೆ.

ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಕಾಸರಗೋಡಿನ ಅನಂತಪುರದಲ್ಲಿ ಅನಂತಪದ್ಮನಾಭನ ಸ್ವರೂಪ ಕುಳಿತ ಭಂಗಿಯಲ್ಲಿದ್ದರೆ, ದಕ್ಷಿಣ ತುದಿಯಲ್ಲಿರುವ ತಿರುವನಂತಪುರದಲ್ಲಿ ಯೋಗನಿದ್ರೆಯ ಭಂಗಿ…!

17ನೇ ಶತಮಾನದಲ್ಲಿ ತಿರುವಾಂಕೂರು ಮಹಾರಾಜ ಮಾರ್ತಾಂಡ ವರ್ಮರ ಕಾಲದಲ್ಲಿ ಈಗಿನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು, ಬೇರೆಲ್ಲೂ ಕಾಣದ, ಕಡುಶರ್ಕರಯೋಗ ಎಂಬ ಆಯುರ್ವೇದೀಯ ದ್ರವ್ಯ ಪಾಕದೊಟ್ಟಿಗೆ ನೇಪಾಳದಿಂದ ತರಿಸಲಾದ, 12,000ಕ್ಕೂ ಮಿಗಿಲಾದ ಸಾಲಿಗ್ರಾಮಗಳಿಂದ ತಯಾರಿಸಲಾದ ಅನಂತನ ವಿಗ್ರಹವನ್ನು ನಾವೀಗ ಕಾಣುತ್ತಿರುವುದು (ಹಾಗಾಗಿ ಮೂಲವಿಗ್ರಹಕ್ಕೆ ಅಭಿಷೇಕ ಮಾಡುವುದಿಲ್ಲ)

ದಿವಾಕರ ಮುನಿಗಳಿಗೆ ಅನಂತನು ಆದೇಶಿಸಿದಂತೆ, ಇಂದಿಗೂ ಸಹಾ ತುಳು ಬ್ರಾಹ್ಮಣರು, ನಂಬೂದರಿ ಬ್ರಾಹ್ಮಣರೊಟ್ಟಿಗೆ ಪೂಜಾದಿಗಳನ್ನು ನಡೆಸುತ್ತಾರೆ.

ಕರ್ನಾಟಕದ ಮಲೆನಾಡು ಮತ್ತು ತುಳುನಾಡುಗಳಲ್ಲಿ ಅನೇಕ ಅನಂತನ ಕ್ಷೇತ್ರಗಳನ್ನು ಕಾಣಬಹುದು.

ಶ್ರೀ ಅನಂತನ ವ್ರತವೂ ಸಹಾ ನಮ್ಮ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪ್ರಚಲಿತವಾಗಿರುವುದು…!

ಅನಂತನ ವ್ರತಕ್ಕೂ ಈ ಕ್ಷೇತ್ರಕ್ಕೂ ಏನಾದರೂ ಸಂಬಂಧವಿದೆಯೇ ಎಂದರೆ..? ಹೌದು.
ಅನಂತ ವ್ರತದ ಅಷ್ಟೋತ್ತರ ಶತನಮಾವಳಿಯಲ್ಲಿ ಬರುವ ನಾಮಗಳು ಈ ಕ್ಷೇತ್ರಾಧಿಪನಾದ ಪದ್ಮನಾಭ ಸ್ವಾಮಿಯ ಕುರಿತಾಗಿಯೇ ಇವೆ.

ದಕ್ಷಹಸ್ತಾ ಸದಾಪೂಜ್ಯ ಶಿವಲಿಂಗ ದಕ್ಷವಿಧಿಯೇ ನಮಃ,
ಪದ್ಮನಾಭಾಯ ನಮಃ,
ಫಣಾಮಣಿವಿಭೂಷಿತಾಯ ನಮಃ,
ಪದ್ಮಕರಾಯ ನಮಃ,
ಶ್ರೀವಿಷ್ಣು ಪರ್ಯಂಕಾಯ ನಮಃ,
ತ್ರಿಪತೀಹಾರಸಂದೃಶ್ಯ ಮುಖನಾಭೀಪದಾಂಭುಜಾಯ ನಮಃ,
ವಿಷ್ಣುಭೋಗ ಶಯನಾಯ ನಮಃ…..
ಎಂಬ ನಾಮಗಳು ಅಲ್ಲಿರುವ ಅನಂತನ ಸ್ವರೂಪವನ್ನು ವರ್ಣಿಸಿದರೆ.

ದಿವಾಕರ ಮುನೀರಿತಾಯ ನಮಃ, ತಾಮ್ರಪರ್ಣಿ ಪರ್ಶ್ವವರ್ತಿನೆ ನಮಃ, ಸುಬ್ರಹ್ಮಣ್ಯ ನಿಭಾಸುಭುವೇ ನಮಃ, ನೃಸಿಂಹ ಕ್ಷೇತ್ರನಿಲಯಾಯ ನಮಃ
…… ಎಂಬ ನಾಮಗಳು, ಅನಂತನು ನೆಲೆಸಿಹ ಈ ಕ್ಷೇತ್ರದ ವಿವರಣೆಯನ್ನು ಕೊಡುತ್ತವೆ.

ನಭಸ್ಯಶುಕ್ಲಸ್ಥ ಚತುರ್ದಶಿ ಪೂಜ್ಯಾಯ ನಮಃ,
ಶೇಷಾಯ ನಮಃ,
ಸಪ್ತಫಣಾನ್ವಿತಾಯ ನಮಃ,
ಕೌಂಡಿನ್ಯವರದಾಯ ನಮಃ, ಕೌಂಡಿನ್ಯವ್ರತತೋಷಿತಾಯ ನಮಃ,
ಯಮುನಾರಾಧನ ತತ್ಪರಾಯ ನಮಃ….. ಮುಂತಾದ ನಾಮಗಳು ಅನಂತವ್ರತ ವಿಧಿ-ಕತೆಯನ್ನೂ ಸೂಚಿಸುತ್ತವೆ..!

ಮೇಲಿನ ಎಲ್ಲ ಸಂಗತಿಗಳನ್ನೂ ಅವಲೋಕಿಸಿದಾಗ ನಮ್ಮ ಕರ್ನಾಟಕದ (ತುಳುನಾಡಿನ) ಅನಂತಪದ್ಮನಾಭನು ಕೇರಳದಲ್ಲಿ ನೆಲೆಸಿದ್ದು, ಈಗಲೂ ನಮ್ಮ ತುಳುವರೆ ಅಲ್ಲಿ ಪೂಜೆಯನ್ನು ಸಲ್ಲಿಸುತ್ತಿಯುವುದು ಮತ್ತು ಹಳೇ ಮೈಸೂರು, ಮಲೆನಾಡು, ತುಳುನಾಡುಗಳಲ್ಲಿ ಅನಂತನ ವ್ರತವು ಪ್ರಸಿದ್ಧವಾಗಿದ್ದು, ಶತ-ಶತಮಾನಗಳಿಂದ ಸಾಂಗವಾಗಿ ನಡೆಯುತ್ತಿರುವುದೂ ಈ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿವೆ.

ಕನ್ನಡ1 of 2
To Change Language, Click ← → (arrow) Button

1 ಅಭಿಪ್ರಾಯ

1 Comment

  1. Harishbharadwaj

    June 13, 2017 at 2:05 am

    Nice information

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!