Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಬ್ರಹ್ಮೋಪದೇಶದ (ಉಪನಯನದ) ಮಹತ್ವ ಮತ್ತು ತಾತ್ವಿಕ ಹಿನ್ನಲೆ ಏನು? – ತಾರೋಡಿ ಸುರೇಶ

Published

on

ಉಪನಯನವು ಮುಖ್ಯತಮವಾದ ಸಂಸ್ಕಾರ. ಮನಸ್ಸಿನ ಕೊಳೆಗಳನ್ನು ಕಳೆದು ಪರಬ್ರಹ್ಮಪ್ರಾಪ್ತಿಗಾಗಿ, ಮತ್ತು ತನ್ಮೂಲಕ ಸತ್ಪುರುಷರಾಗುವುದಕ್ಕೆ ನಡೆಸುವ ಅತ್ಯಗತ್ಯವಾದ ಸಂಸ್ಕಾರ. ”ಸತ್ಸಂತಾನಸೌಭಾಗ್ಯಕ್ಕಾಗಿ ವಿವಾಹ ಮಾಡಿಕೊಳ್ಳುತ್ತೇವಾದ್ದರಿಂದ ಅದಕ್ಕೆ ಮೊದಲು ಸತ್ಪುರುಷರಾಗಬೇಕಾಗುತ್ತದೆ.” ಎಂದು ಶ್ರೀರಂಗಮಹಾಗುರುಗಳು ಹೇಳಿದ್ದರು. ಇಂದು ಉತ್ಸವಪ್ರಧಾನವಾಗಿ ನಡೆಯುತ್ತಿದೆ. ವಿವಾಹಕ್ಕೆ ಪರವಾನಿಗೆ ಬೇಕು ಎಂಬುದಾಗಿ ಕಾಟಾಚಾರಕ್ಕೆ ಮಾಡುವ ಕ್ರಿಯೆಯಾಗಿದೆ. ‘ಉಪನಯನ’ವೆಂದರೆ ಪರತತ್ವದ ಸಮೀಪಕ್ಕೆ ಜೀವವನ್ನು ಕರೆದೊಯ್ಯುವುದು ಮತ್ತು ಅದಕ್ಕಾಗಿ ಆಚಾರ್ಯನ ಹತ್ತಿರ ಕರೆದೊಯ್ಯುವುದು ಎಂದರ್ಥ. ಬ್ರಹ್ಮವಿದ್ಯೆಗೆ ದ್ವಾರವಾದ ಗಾಯತ್ರಿಯನ್ನು, ಅದರ ವಿಸ್ತಾರವಾದ ವೇದವನ್ನೂ ಉಪದೇಶಿಸುವುದರಿಂದ ‘ಬ್ರಹ್ಮೋಪದೇಶ’ವೆಂಬ ಹೆಸರು.

ಈ ಕರ್ಮದಲ್ಲಿ ಗುರುವು ಗಾಯತ್ರಿಯನ್ನು ಉಪದೇಶಿಸಿ ಹಳೆಯ ಜನ್ಮವನ್ನು ಕಳಚಿ ಹೊಸಜನ್ಮವನ್ನು ಉಂಟುಮಾಡುತ್ತಾನೆ. ದಿವ್ಯದೃಷ್ಟಿಯನ್ನು ಪ್ರಬೋಧಗೊಳಿಸುತ್ತಾನೆ. ತಾಯಿ ಗಾಯತ್ರಿಯ ಹೃದಯಕ್ಕೆ ಬೆಳಕಾಗಿರುವ ಪರಂಜ್ಯೋತಿಯ ಧ್ಯಾನಕ್ಕೆ ಬೇಕಾದ ಪಾತ್ರತೆಯನ್ನು ಕೊಡುತ್ತಾನೆ. ಪರಮಾತ್ಮ ಸಾಕ್ಷಾತ್ಕಾರದ ಬಯಕೆ ಇರುವವರು ಇದಕ್ಕೆ ಅನೇಕ ನಿಯಮಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು. ತಂದೆಯು ಜ್ಞಾನಿಯಾಗಿದ್ದರೆ ಅವನೇ ಉಪನಯನ ಮಾಡುವುದು ಉತ್ತಮಕಲ್ಪ. ಏಕೆಂದರೆ ರಕ್ತಸಂಬಂಧ-ಜ್ಞಾನಸಂಬಂಧ ಎರಡೂ ಕೂಡಿಬರುತ್ತದೆ. ಉಪನಯನಕ್ಕೆ ಸಂಬಂಧಿಸಿದಂತಹ ಉಳಿದ ಕರ್ಮಗಳನ್ನು ಬೇರೆಯವರು ಮಾಡಿದರೂ ಬ್ರಹ್ಮೋಪದೇಶವನ್ನು ಮಾತ್ರ ಜ್ಞಾನಿಯೇ ಮಾಡಬೇಕು ಎಂದು ಪರಂಪರೆಯು ಸಾರುತ್ತದೆ. ಬ್ರಹ್ಮವಿತ್ತಮನಾಗಿ, ಪ್ರಾಣವಿದ್ಯೆಯನ್ನು ಅರಿತು ಪರಬ್ರಹ್ಮವನ್ನು ಸದಾ ಧ್ಯಾನಿಸುವವನೇ ಬ್ರಹ್ಮೋಪದೇಶವನ್ನು ಮಾಡಲು ಯೋಗ್ಯನಾದವನು. ಭಗವಂತನ ಶಕ್ತಿಯು ಆತನ ವಾಣಿಯ ಮೂಲಕ ತೇಜೋಮಯವಾಗಿ, ನಾದಮಯವಾಗಿ ಹರಿದು ಬರುತ್ತದೆ. ಅವನು ಶಿಷ್ಯನನ್ನು ಆಲಿಂಗನಮಾಡಿಕೊಂಡು ಶಿಷ್ಯನ ಬಲಗಿವಿಯಲ್ಲಿ ಉಪದೇಶ ಮಾಡುತ್ತಾನೆ. ದೇಹಪ್ರಕೃತಿಯಲ್ಲಿ ವಿಶೇಷವಾದ ಧರ್ಮವು ಪ್ರಬೋಧಗೊಳ್ಳುವ ಕಾಲವನ್ನನುಸರಿಸಿ ವಯಸ್ಸನ್ನು ನಿರ್ಣಯ ಮಾಡಿದ್ದಾರೆ. “ಉಕ್ತಕಾಲದಲ್ಲಿಯೇ ಮಾಡುವುದು ಪ್ರಶಸ್ತ. ಏಕೆಂದರೆ ಆ ಸಮಯದಲ್ಲಿ ಕುಂಡಲಿನೀ ಶಕ್ತಿಯು ಸುಲಭವಾಗಿ ಜಾಗೃತವಾಗಿ ಆತ್ಮಮಾರ್ಗದಲ್ಲಿ ಶೀಘ್ರವಾಗಿ ಸಿದ್ಧಿಯಾಗಲು ಸಹಾಯವಾಗುತ್ತದೆ” ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಕಾಲವನ್ನು ಮೀರಿದರೆ ಪತಿತರಾಗುತ್ತಾರೆ ಎಂದು ಶಾಸ್ತ್ರಗಳು ಎಚ್ಚರಿಸಿವೆ.

 

ಯಜ್ಞೋಪವೀತ ಧಾರಣ, ಕುಮಾರ ಭೋಜನ, ನೂತನ ವಸ್ತ್ರ ಧಾರಣೆ, ಮೌಂಜೀಧಾರಣ, ಅಜಿನಧಾರಣ, ನಂತರ ಉಪನಯನದ ಕೇಂದ್ರಬಿಂದುವಾದ ಬ್ರಹ್ಮೋಪದೇಶ, ಆಚಾರ್ಯ-ವಟುವಿನ ಒಪ್ಪಂದ ಮತ್ತು ಅಗ್ನಿಕಾರ್ಯ ಹೀಗೆ ವಿಭಿನ್ನಘಟ್ಟಗಳುಂಟು. ಇದರಲ್ಲಿ ಅಳವಡಿಸಿರುವ ಒಂದೊಂದು ವಿಷಯವೂ ಜ್ಞಾನ-ವಿಜ್ಞಾನ ಪೂರ್ಣವಾಗಿವೆ. ಪ್ರಧಾನ ಉದ್ಧೇಶಕ್ಕೆ ಅನುಗುಣವಾಗಿವೆ. ಉದಾಹರಣೆಗೆ ಯಜ್ಞೋಪವೀತದ ರಚನಾವಿಧಾನದಲ್ಲಿಯೇ ಸಮಸ್ತ ಸೃಷ್ಟಿತತ್ವಗಳನ್ನು, ಸೃಷ್ಟಿಯಕ್ರಮವನ್ನು ತಿಳಿಸುವ ಕಲೆಯಿದೆ. ಅದನ್ನು ಧರಿಸುವ ಹಿನ್ನೆಲೆಯಲ್ಲಿ ಪ್ರಾಣಗತಿಗಳ ಅರಿವಿದೆ. ಜೀವಸಂಚಾರದ ಮರ್ಮಗಳಿವೆ. ಅದರ ಅರ್ಥವತ್ತಾದ ಸ್ಮರಣೆ ಮತ್ತು ಸ್ಪರ್ಷವು ಆಯುಸ್ಸನ್ನೂ, ಬಲವನ್ನೂ ತೇಜಸ್ಸನ್ನೂ ನೀಡುತ್ತದೆ. ಅದರದೇ ಭಾಷೆಯಲ್ಲಿ ದಾಟಬೇಕಾದ ತತ್ವ ಸೋಪಾನಗಳನ್ನು ತಿಳಿಸುತ್ತದೆ.

ಯಜ್ಞೋಪವೀತ ಧಾರಣೆ

 

ನೂತನ ವಸ್ತ್ರ ಧಾರಣೆ, ಮೌಂಜೀಧಾಾರಣೆ ಮತ್ತು ಅಜಿನಧಾರಣೆ.

 

ಉಪನಯನದ ಕೇಂದ್ರಬಿಂದುವಾದ ಬ್ರಹ್ಮೋಪದೇಶ

ಉಪನೀತ ವಟುವಿಗೆ ಮೊದಲ ಭಿಕ್ಷೇಯನ್ನು ತಾಯಿ ನೀಡುತ್ತಾಳೆ. ಇದಕ್ಕೆ ನಾವು ಮಾತೃಭಿಕ್ಷೇ ಎನ್ನುವುದು ರೂಢಿ.

ಮೌಂಜೀ ಎಂಬ ಹುಲ್ಲಿನ ನಡುಕಟ್ಟನ್ನು ಕಟ್ಟುತ್ತಾರೆ. ಅದರ ಸ್ಪರ್ಷವು ಸಂಯಮವನ್ನು ಕೊಡುತ್ತದೆ. ಯೋಗಸಾಧನೆಯಲ್ಲಿ ‘ಉಡ್ಢೀಯನ’ ಎಂಬ ಬಂದವು ಕಟಿಪ್ರದೇಶದಲ್ಲಿ ಉಂಟಾಗುತ್ತದೆ. ಅದರ ಸ್ಮರಣೆಯನ್ನೂ ಕೊಡುವುದಲ್ಲದೆ, ಅಂತಹ ಬಂಧವು ಏರ್ಪಡಲು ಬಹು ಪೋಷಕವಾದ ಪದಾರ್ಥ. ಹಾಗೆಯೇ ದಂಡ ಮತ್ತು ಅಜಿನಧಾರಣೆಗಳೂ ಕೂಡ. ಈ ದ್ರವ್ಯಗಳು ದೇವತೆಗಳನ್ನು ಪ್ರಸನ್ನಗೊಳಿಸಿ ಇಹ-ಪರ ಜೀವನಕ್ಕೆ ಗುಟುಕು ಕೊಡುತ್ತವೆ. ಉಪನೀತನಾದವನು ಬ್ರಹ್ಮಚಾರಿ ಎಂದರೆ ಬ್ರಹ್ಮದಲ್ಲಿ ಸಂಚರಿಸುವವನಾಗಬೇಕು. ಸಂಧ್ಯಾವಂದನೆಯನ್ನು ತಪ್ಪಿಸಬಾರದು. ಬ್ರಹ್ಮಗಾಯತ್ರಿಯನ್ನು ಜಪಿಸಬೇಕು. ಇಂದ್ರಿಯಸಂಯಮವನ್ನು ಪಾಲಿಸಬೇಕು. ಭುವಿಯಿಂದ ದಿವಿಗೆ ಹಾರಿಸುವ ಈ ಸಂಸ್ಕಾರವನ್ನು ರೂಪಿಸಿಕೊಟ್ಟ ಋಷಿಗಳ ಮಹಾಮೇಧೆಗೆ ಪುನಃ ಪುನಃ ನಮನಗಳು.

 

– ತಾರೋಡಿ ಸುರೇಶ್.

 ಫೋಟೋ ಕೃಪೆ – ಶ್ರೀನಿಧಿ, ಬೆಂಗಳೂರು
ಲೇಖನದ ಮೂಲ
ಅಷ್ಟಾಂಗ ಯೋಗ ವಿಜ್ಞಾನ ಮಂದಿರ ಜಾಲತಾಣ
https://ayvm-articles.blogspot.com/2019/06/brahmanatta-nayanamaduva-brahmopadesha.html?m=1
ಸೂಚನೆ: 04/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!