ಅಂದು ಅಮ್ಮನವರ ದೇವಾಲಯದಲ್ಲಿ ಅಮ್ಮನವರ ಆರಾಧನೆಗೆ ವಿಶೇಷವಾದ ಹಾಗು ಪ್ರಶಸ್ತವಾದ ದಿನ(ದೈವಾರಾಧನೆಗೆ ಪ್ರತಿ ನಿತ್ಯವೂ ಪ್ರಶಸ್ತವಾದ ದಿನವೇ). ಅಂದರೆ ಅಂದು ಶರತ್ಕಾಲದ ಆಶ್ವೀಜಮಾಸದ ಪೌರ್ಣಮಿಯ ದಿನ. ಅದಕ್ಕಾಗಿ ಅರ್ಚಕರು ಎಂದಿಗಿಂತ ಹೆಚ್ಚಾಗಿಯೇ ಭಕ್ತಾದಿಗಳಿಂದ ಅಭಿಷೇಕಕ್ಕೆಂದು ಹಾಲನ್ನು ಸಂಗ್ರಹಿಸಿ ದೇವಾಲಯಕ್ಕೆ ತೆಗೆದುಕೊಂಡು ಹೋಗುತಿದ್ದರು.
ದೇವಾಲಯದ ಬಳಿ ತೆರಳಿ ಬಾಗಿಲು ತೆಗೆಯುತಿದ್ದಾಗ ಆ ಬಾಗಿಲು ತಾಕಿ ಅಭಿಷೇಕಕ್ಕೆಂದು ತಂದಿದ್ದ ಅಷ್ಟೂ ಹಾಲು ಚೆಲ್ಲಿಹೋಯಿತು. ಅರ್ಚಕರು ತಡಬಡಾಯಿಸಿ ಹೋದರು . ಏನು ಮಾಡಬೇಕೆಂದು ತಿಳಿಯದಾದರು. ಆಗಲೆ ಸಮಯ ೧೦ ಘಂಟೆಯಾಗಿದೆ, ಮೇಲಾಗಿ ಹಳ್ಳಿ ಹುಡುಕಿದರೂ ಎಲ್ಲೂ ಹಸಿಹಾಲು ಸಿಗುವುದಿಲ್ಲ. ದಿಕ್ಕುಕಾಣದಂತಾದ ಅರ್ಚಕರು ನೇರವಾಗಿ ಅಮ್ಮನವರ ಗರ್ಭಗುಡಿಗೆ ಹೋಗಿ ಆಕೆಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ ಭಾವಪರವಶತೆಯಿಂದ ಆಕೆಯನ್ನೇ ನೋಡುತ್ತಾ ,” ಅಮ್ಮಾ ಇದೇನು ಇಂದು ಹೀಗೆ ಮಾಡಿದೆ, ಇದಾವುದಾದರೂ ಅಪಶಕುನದ ಸಂಕೇತವೇ,ಅಥವಾ ನಮ್ಮ ಮೇಲೆ ನಿನಗೇನಾದರೂ ಮುನಿಸೇ?, ಏಕೆ ಹೀಗಾಯಿತು, ಕಾರಣವಾದರೂ ಏನೂ? ನಿನ್ನ ಪ್ರತಿಷ್ಟಾಪನೆಯಾದಾಗಲಿಂದ ಒಂದು ದಿನವೂ ನಿನಗೆ ಕ್ಷೀರಾಭಿಷೇಕ ನಿಂತಿದ್ದಿಲ್ಲ, ಇಂದು ನಿನಗೆ ಅಭಿಷೇಕ ಮಾಡಲು ಹಾಲು ಇಲ್ಲದಂತಾಯಿತಲ್ಲಾ,ನಾನೀಗೇನು ಮಾಡಲಮ್ಮಾ, ” ಎನ್ನುತ್ತಾ ಅಮ್ಮನವರ ಬಳಿ ಬೇಡುತ್ತಿರಲು, ಇದ್ದಕಿದ್ದಂತೆ ಒಂದು ಕಪಿಲ ಹಸು ದೇಗುಲದ ಮುಖ್ಯ ಸ್ಥಂಭದ ಬಳಿ ಬಂದು ನಿಂತಿತು, ಅದರ ಹಿಂದೆಯೇ ಅದರ ಕರುವೂ ಕೂಡ ಅಲ್ಲಿಗೆ ಬಂದು ಆ ಹಸುವಿನ ಕೆಚ್ಚಲಿನಿಂದ ಹಾಲು ಕುಡಿಯಲು ಆರಂಭಿಸಿತು.
ತಕ್ಷಣ ಗಾಬರಿಯಿಂದ ಓಡಿ ಬಂದ ಆ ಹಸುವಿನ ಯಜಮಾನ,” ಐನೋರೇ ಒಳಗಡೆಯಿಂದ ಒಂದು ಪಾತ್ರೆ ತಂದುಕೊಡಿ, ಹಾಲು ಕರೆದ್ಕೊಡ್ತೀನಿ, ಇವತ್ತು ಬೆಳಗಿನಜಾವದಿಂದ ಈ ಹಸು ಕರು ಎರಡೂ ತಪ್ಪಿಸಿಕೊಂಡ್ಬಿಟ್ಟಿತ್ತು. ಈಗ ಅವ್ವನ ಗುಡಿಮುಂದೆ ಅದೆ ಅಂತ ಯಾರೋ ಹೇಳಿದ್ರು, ಸಧ್ಯ ಅಸ ಸಿಕ್ತಲ್ಲಾ, ಇವತ್ತಿನ ಹಾಲ್ನೆಲ್ಲಾ ಆ ತಾಯಿ ನಮ್ಮಂವಂಗೇ ಕೊಡ್ತೀನಿ, ಬಿರ್ನೆ ಪಾತ್ರೆ ಕೊಡಿ ಐನೋರೆ” ಎನ್ನುತ್ತಾನೆ. ತಾಯಿಯ ಮಹಿಮೆಯನ್ನು ಕಂಡು ಕಣ್ತುಂಬಿಕೊಂಡ ಅರ್ಚಕರು ಒಳಗಿನಿಂದ ಪಾತ್ರೆಯನ್ನು ತಂದುಕೊಡುತ್ತಾರೆ. ಮತ್ತು ಅದೇ ಹಾಲಿನಿಂದ ಅಮ್ಮನವರಿಗೆ ಅಭಿಷೇಕವನ್ನೂ ಮಾಡುತ್ತಾರೆ.
ಕ್ಷೀರಾಭಿಷೇಕದಿಂದ ಅಮ್ಮನವರಿಗೇನೂ ಆಗಬೇಕಿಲ್ಲ, ಅಂತಹವುಗಳನ್ನು ಬಯಸುವವಳೂ ಅವಳಲ್ಲ, ಕಾರಣ ಅವಳು ತಾಯಿ. ತಾಯಿ ಎಲ್ಲವನ್ನೂ ತನ್ನ ಮಕ್ಕಳಿಗಾಗಿಯೇ ಇರಲಿ ಎನ್ನುತ್ತಾಳೆಯೇ ಹೊರತು, ತನಗೇನೂ ಇಟ್ಟುಕೊಳ್ಳುವುದಿಲ್ಲ. ಆದರೆ ನಾವು ಮಕ್ಕಳು ಆಕೆಗೆ ಅಭಿಷೇಕ ಅಲಂಕಾರ ಉತ್ಸವಾದಿಗಳ ಮೂಲಕ ಅವಳನ್ನು ಮೆರೆಸಿ ಕಣ್ತುಂಬಿಕೊಂಡು ಸಂತೋಷ ಪಡುತ್ತೇವೆ. ಅವಳ ಸೇವೆ ಮಾಡಿ ಸಂತೋಷಪಡಬೇಕಾದದ್ದು ನಮ್ಮ ಕರ್ತವ್ಯ. ಭಯದಿಂದಾಗಲೀ ಮಾಡಬೇಕಲ್ಲಾ ಎಂದು ಮಾಡುವುದರಿಂದಾಗಲೀ ಯಾವುದೇ ಪ್ರಯೋಜನವಿಲ್ಲ.
ಅಂಬಾ ದಿವ್ಯಚರಣಾರವಿಂದಾರ್ಪಣಮಸ್ತು.
ಅಂಬಾಸುತ