Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಭಜಿಸು ಮನವೇ ಸಾಲಿಗ್ರಾಮದ ನರಸಿಂಹನ

Published

on

ಸ್ವಾಮಿಯು ನೃಸಿಂಹ ಸಕಲವು ನೃಸಿಂಹ.

ಸಾಲಿಗ್ರಾಮ ಶಿಲೆಯಲ್ಲಿ ಸಿಂಹ ಮುಖ ಮತ್ತು ಮನುಷ್ಯನ ಶರೀರ ಹಾಗೂ ಸೂರ್ಯ-ಚಂದ್ರ-ಅಗ್ನಿಗಳೆಂಬ ತ್ರಿನೇತ್ರದೊಂದಿಗೆ ಶಂಖ-ಚಕ್ರಧಾರಿ ದ್ವಿಭುಜ ನೃಸಿಂಹನ ವಿಗ್ರಹವು ಭಾರತಖಂಡದಲ್ಲಿ ಈ‌ ಕ್ಷೇತ್ರದಲ್ಲಿ ಮಾತ್ರ ಇರಬಹುದಾಗಿದೆ.ಈ ಕ್ಷೇತ್ರವು ಕುಂದಾಪುರದಿಂದ ಕೆವಲ 15 ಕಿ.ಮಿ ದೂರದಲ್ಲಿದೆ.ಪುರಾಣದಲ್ಲಿ,ಇತಿಹಾಸ ಮತ್ತು ಜಾನಪದದಲ್ಲಿ ಈ ಕ್ಷೇತ್ರದ ವಿವರಣೆ ಈ ಕೆಳಗಿನಂತಿದೆ.

ಪೌರಾಣಿಕ ಹಿನ್ನೆಲೆ :
ಪದ್ಮಪುರಾಣದ ಪುಷ್ಕರ‌ ಖಂಡಾಂತರ್ಗತವಾದ ಶ್ರೀಸಾಲಿಗ್ರಾಮ ಕ್ಷೇತ್ರಮಹಾತ್ಮ್ಯೆಯಲ್ಲಿನ ಈ ಕ್ಷೇತ್ರದ ಉಲ್ಲೇಖ ಹೀಗಿದೆ.
ಕುಂಭಕಾಶೀಕ್ಷೇತ್ರದಿಂದ ದಕ್ಷಿಣಕ್ಕೆ ಸೀತಾನದಿಯವರೆಗೆ ವ್ಯಾಪಿಸಿರುವ ಪ್ರದೇಶದ ಮಧ್ಯದಲ್ಲಿ ಕೂಟಮುನಿಪುಂಗವರು ಕೂಟವಾಸಿಗಳಾಗಿ ತಪಸ್ಸನ್ನಾಚರಿಸುತ್ತಿದ್ದ ಪ್ರಸಿದ್ಧವಾದ ಕೂಟ ಎಂಬ ಹೆಸರಿನ ಮಹಾಕ್ಷೇತ್ರವನ್ನು ನಾರದ ಮುನಿಗಳು ಸಂದರ್ಶಿಸಿದರು. ಅಲ್ಲಿ ಅನೇಕ ಮುನಿಗಳು ತಪಗೈಯುವುದನ್ನು ನೋಡಿ, ನಾರದರು ಕೆಲವು ಕಾಲ ಪರ್ಯಂತ ತಪಸ್ಸನ್ನಾಚರಿಸಿದರು.ಮಹರ್ಷಿ ನಾರದರು ತಪಗೈದ ಸ್ಥಳದ ಮಧ್ಯಭಾಗದಿಂದ ಭಯಂಕರವಾದ ಶಬ್ದವು ಕೇಳಿಸಿತು. ಪರ್ವತಗಳು ಕಂಪಿಸಿದವು,ಸಮುದ್ರವು ಕ್ಷೋಭೆಗೊಂಡಿತು.  ವಾಯುವಿನ ಉತ್ಪಾತದಿಂದ ಋಷಿಗಳ ಆಶ್ರಮವು ಮುರಿದು ಬೀಳುವಂತಾಯಿತು. ಮೃಗಗಳೆಲ್ಲವೂ ಓಡಿದವು. ಪಕ್ಷಿಗಳೆಲ್ಲವೂ ದಿಗ್ಭ್ರಮೆಗೊಂಡು ಚಕ್ರದಂತೆ ತಿರುಗಿದವು. ಋಷಿಗಳೆಲ್ಲಾ ಭ್ರಾಂತಚಿತ್ತರಾದರು. ಉಳಿದವರೆಲ್ಲರೂ ಆಪತ್ತಿಗೀಡಾದರು. ಆ ಋಷಿಗಳೆಲ್ಲರೂ, ತ್ರಿಗುಣಾತ್ಮಕನಾದ ಶ್ರೀಮನ್ನಾರಯಣನನ್ನು ಧ್ಯಾನಿಸುತ್ತಿದ್ದ ನಾರದರ ಬಳಿ ಬಂದು, ಮಹರ್ಷಿಯೆ! ಭಯಗ್ರಸ್ತರಾದ ನಮ್ಮೆಲ್ಲರನ್ನೂ ಕಾಪಾಡಿ ಎಂದು ಮೊರೆಯಿಟ್ಟರು. ಆ ಸಮಯದಲ್ಲೆ ದಿವ್ಯವಾಣಿಯೊಂದುಂಟಾಗಿ ಇಲ್ಲಿ “ಹದಿನಾಲ್ಕು ಲೋಕಗಳನ್ನು ಉದರದಲ್ಲಿ ಇಟ್ಟುಕೊಂಡು ಯೋಗಾನಂದ ನೃಸಿಂಹ ಎಂಬ ಹೆಸರಿನ ಶಿಲಾಕೃತವಾಗಿರುವ ಶಂಖಚಕ್ರಗಳನ್ನು ಧರಿಸಿದ ಎರಡೂ ಬಾಹುಗಳಿಂದ ಶೋಭಿಸುವ (ಶಂಖ ಹಾಗೂ ಚಕ್ರ ತೀರ್ಥಗಳ ನಡುವೆ ನೆಲೆಸಿರುವ) ತ್ರಿಮೂರ್ತಿರೂಪವಾದ ಅಶ್ವತ್ಥ ವೃಕ್ಷದ ಮಧ್ಯದಲ್ಲಿ ಸರ್ವರಕ್ಷಕ ಸಾಲಿಗ್ರಾಮಶಿಲಾರೂಪಿ ಶ್ರೀನೃಸಿಂಹಮೂರ್ತಿಯಾಗಿರುತ್ತದೆ
ಅದನ್ನು ಹುಡುಕಿ ನಾರದರು ಪ್ರತಿಷ್ಠಾಪಿಸಬೇಕೆಂದು ಧ್ವನಿ ತೇಲಿ ಬಂದಿತು.  ತಕ್ಷಣ ನಾರದರು ಮುನಿಪುಂಗವರೊಡಗೂಡನೆ ಆ ಅಶ್ವತ್ಥಮರದಲ್ಲಿ ಆವಿರ್ಭವಿಸಿದ ಅನಾದಿ ಯೋಗಿ ಶ್ರೀ ನೃಸಿಂಹ ವಿಗ್ರಹಕ್ಕೆ ವಂದಿಸಿ ಪ್ರತಿಷ್ಠಾಪಿಸಿ
ನೃಸಿಂಹನನ್ನು ಪ್ರಾರ್ಥಿಸಿದರು.ನಾರದ ಮುನಿಗಳ ಪ್ರಾರ್ಥನೆಯಿಂದ ಸಂತುಷ್ಟನಾದ ನೃಸಿಂಹ ದೇವರು ನೆರೆದಿದ್ದ ಎಲ್ಲರಿಗೆ ತನ್ನ ದರ್ಶನ ನೀಡಿ ಮುನಿಶ್ರೇಷ್ಠನೇ!ನಿನಗೆ ಅನುಗ್ರಹಿಸುವೆನು ನಿನ್ನ ಅಭಿಷ್ಟವಾದ ವರವನ್ನು ಕೇಳೆಂದಾಗ ನಾರದರು ನರಸಿಂಹನನ್ನು ಕುರಿತು
ಈ ಕೂಟ ಸ್ಥಳದಲ್ಲಿ  ನೆಲೆಸಿರುವ  ಜನರಿಗೆಲ್ಲಾ ಶ್ರೇಯಸ್ಸನ್ನು ಅನುಗ್ರಹಿಸುವುದಕ್ಕಾಗಿ ಶಂಖ ಮತ್ತು ಚಕ್ರ ಎಂಬೀ ಎರಡು ತೀರ್ಥಗಳಲ್ಲಿ ಮತ್ತು ಈ ದಿವ್ಯಮೂರ್ತಿಯಲ್ಲಿ ಆಚಂದ್ರಾರ್ಕವಾಗಿ ನೀನು ನೆಲೆಸಿರುವವನಾಗು ಪ್ರಾರ್ಥಿಸಿದಾಗ ಅದಕ್ಕೆ ನರಸಿಂಹನು ತನ್ನ ಸಹಮತಿ ನೀಡಿ ಅಂದಿನಿಂದ ಈ ಕ್ಷೇತ್ರದಲ್ಲಿ ನೆಲೆಸಿ ಸಕಲ ಭಕ್ತ ಜನರ ಕಷ್ಟ-ಕಾರ್ಪಣ್ಯಗಳನ್ನು ಹೋಗಲಾಡಿಸುತ್ತಿದ್ದಾನೆ.
ಈ ಕೂಟಸ್ಥ ಕ್ಷೇತ್ರದ ಮಧ್ಯದಲ್ಲಿ ಶಾಲಗ್ರಾಮ ಶಿಲಾರೂಪಿ ಶ್ರೀನೃಸಿಂಹನು ವ್ಯಕ್ತವಾದ್ದರಿಂದ ಈ ಸ್ಥಳವನ್ನು “ಸಾಲಿಗ್ರಾಮ”ವೆಂದು ಕರೆಯುತ್ತಾರೆ.  ಚಕ್ರತಿರ್ಥದಲ್ಲಿ ಸ್ನಾನ ಮಾಡಿದರೆ ಸರ್ವರೋಗ ಮತ್ತು ಶತ್ರುಭಯಗಳು ನಾಶವಾಗುವವು.ಶಂಖತೀರ್ಥದಲ್ಲಿ ಸ್ನಾನ ಮಾಡಿದರೆ ಬ್ರಹ್ಮಹತ್ಯಾದಿ ಮಹಾಪಾಪಗಳು ಪರಿಹರಿಸಲ್ಪಡುವವು.‌ ಆದ್ದರಿಂದ ಈ ಎರಡು ತೀರ್ಥಗಳಲ್ಲಿ ಸ್ನಾನ ಮಾಡಿ ಶ್ರೀನೃಸಿಂಹನ ದರ್ಶನ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುವುದೆನ್ನುತ್ತದೆ ಪುರಾಣ.

ಐತಿಹಾಸಿಕ ಹಿನ್ನಲೆ :

ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ – ಮಯೂರವರ್ಮನ ಮೊಮ್ಮಗ ಲೋಕಾದಿತ್ಯನ ಅಪೇಕ್ಷೆಯಂತೆ ಕ್ಷೇತ್ರಕ್ಕೆ ಆಗಮಿಸಿದ “ಭಟ್ಟಾಚಾರ್ಯ”ರೆಂಬ ಮಹಾಪುರುಷರು ಇಲ್ಲಿನ ಗ್ರಾಮಗಳಲ್ಲಿ ಪೌಂಡ್ರ, ಅತಿ ರಾತ್ರ ಮೊದಲಾದ ಮಹಾಯಾಗ ಮಾಡುತ್ತಾರೆ.
ಅದಕ್ಕೆ ಪೂರ್ವಭಾವಿಯಾಗಿ ಈ ಕ್ಷೇತ್ರದಲ್ಲಿ ಮಹಾಗಣಪತಿಯನ್ನು ಪ್ರಾರ್ಥಿಸಿ ಅನುಗ್ರಹ ಪಡೆದರು. ಮಹಾಗಣಪತಿಯ ಆದೇಶದಂತೆ ಶ್ರೀ ಮಹಾಗಣಪತಿ ಯಂತ್ರವನ್ನು ಆದಿಯಲ್ಲಿ ಸ್ಥಾಪನೆ ಮಾಡಿ, ಅದರ ಮೇಲೆ ಅಲ್ಲಿಯೇ ಅಶ್ವತ್ಥ ಮರದ ಪೊಟರೆಯಲ್ಲಿದ್ದ ನಾರದಮುನಿ ಪ್ರತಿಷ್ಠಾಪಿತ ಯೋಗಾನಂದ ನೃಸಿಂಹ  ದೇವರ ವಿಗ್ರಹವನ್ನು ಕಮಲಪತ್ರದ ಮೇಲೆ ಪುನಃ ಪ್ರತಿಷ್ಠೆ ಮಾಡಿದರು‌. ಆನೆ (ಮಹಾಗಣಪತಿ) ಮತ್ತು ಸಿಂಹ (ಶ್ರೀಯೋಗನಂದ ನೃಸಿಂಹ)ಅನ್ಯೋನ್ಯತೆ ಯಿಂದ ಇರುವುದರಿಂದ ಭಟ್ಟಾಚಾರ್ಯರು ಈ ಕ್ಷೇತ್ರವನ್ನು “ನಿರ್ವೈರ ಸ್ಥಳ” ವೆಂದು ಘೋಷಿಸಿ, ಸಾಲಿಗ್ರಾಮ ಸುತ್ತಮುತ್ತಲಿನ 14 ಗ್ರಾಮದ ಬ್ರಾಹ್ಮಣರು ಈ ದೇವರನ್ನು ಗುರುವಾಗಿಟ್ಟುಕೊಂಡು ಪೂಜಿಸತಕ್ಕದ್ದೆಂದು ಆದೇಶಿಸಿದರು.
ಇವರುಗಳನ್ನು ಈಗ ಕೋಟ ಬ್ರಾಹ್ಮಣರೆಂದು ಕರೆಯುತ್ತಾರೆ. ದೇಶಾದ್ಯಂತ ಕಂಡುಬರುವ ಹಂದೆ,ಬಾಸ್ರಿ,ತುಂಗ,ನಾವಡ,ಹೊಳ್ಳ,ಮಯ್ಯ,ಹೆಬ್ಬಾರ,ಕಾರಂತ ಎಂಬ ಕುಲನಾಮವುಳ್ಳ ಅಷ್ಟವರ್ಗಗಳ ಹಾಗೂ ಅಲ್ಸೆ,ಊರಾಳ,ಹೇರಳೆ ಮುಂತಾದ ಉಪಗೃಹಗಳ ಕೋಟ ಬ್ರಾಹ್ಮಣರಿಗೆ ಈ ಯೋಗನಂದ ನೃಸಿಂಹನೇ‌ ಗುರು ಮತ್ತು ಕುಲದೇವರು. ಹಾಗಾಗಿ ಎಲ್ಲಾ ಶುಭಶೋಭನಾದಿ ಕೆಲಸ ಪ್ರಾರಂಭಿಸುವಾಗ ಶ್ರೀಗುರುನರಸಿಂಹನನ್ನು ಪ್ರಾರ್ಥಿಸಿ ಗುರು ಕಾಣಿಕೆಯನ್ನು ತೆಗೆದಿಡುವ ಸಂಪ್ರದಾಯ ಈ ಕುಟುಂಬಗಳಲ್ಲಿ ಇವತ್ತಿಗೂ ನಡೆದುಕೊಂಡು ಬಂದಿದೆ.

ಜಾನಪದ ನಂಬಿಕೆ:

ಒಂದು ಜಾನಪದ ನಂಬಿಕೆಯ ಪ್ರಕಾರ ಹಿಂದೆ ಇಲ್ಲಿನ ದೇವರು ಪೂರ್ವಕ್ಕೆ ಮುಖಮಾಡಿದ್ದು ದೇವಳದ ಮುಂಬಾಗದ ಗದ್ದೆಯಲ್ಲಿನ ಬೇಸಾಯ ಸುಟ್ಟು ಹೋಗುತ್ತಿತ್ತಂತೆ.  ಇದರಿಂದ ನೊಂದ ಓರ್ವ ರೈತ ದೇವರಿಗೆ ತನ್ನ ಹಾರೆಯಿಂದ ಪೆಟ್ಟು ಮಾಡುತ್ತಾನಂತೆ
ತದನಂತರ ಊರವರ ಸಮ್ಮುಖದಲ್ಲಿ ವಿಪ್ರರ ಮುಖೇನ ದೇವರನ್ನು ಪಶ್ಚಿಮ ದಿಕ್ಕಿಗೆ ತಿರುಗಿಸಿ, ಅಲ್ಲದೇ ದೇವರ ತೀಕ್ಷ್ಣ ದೃಷ್ಠಿಯನ್ನು ತಡೆಯಲು ಕುಕ್ಕೆಗುಂಡಿಯಿಂದ ಶ್ರೀ ಆಂಜನೇಯ ದೇವರನ್ನು ತಂದು ಪೂರ್ವಕ್ಕೆ ಮುಖಮಾಡಿ ಶ್ರೀ ಗುರನರಸಿಂಹನಿಗೆ ಎದುರಾಗಿ ಪ್ರತಿಷ್ಠಾಪಿಸುತ್ತಾರಂತೆ.   ಈ ಕಾರಣದಿಂದ ಆಂಜನೇಯ ಸ್ವಾಮಿಗೆ ದೇಹ ತಂಪಾಗಿರಲೆಂದು ಚಂದ್ರ ಮತ್ತು ಬೆಣ್ಣೆಯ ಲೇಪವನಗೈಯಲಾಗುತ್ತದೆ. ಶ್ರೀ ನೃಸಿಂಹ ದೇವಸ್ಥಾನದ ಬಡಗುಬದಿಯ ಒಳ ಪೌಳಿಯ ವಾಯವ್ಯದಲ್ಲಿ ಗಣಪತಿ ವಿಗ್ರಹವನ್ನು ತೆಂಕುಬದಿಯ ಒಳ ಪೌಳಿಯ ನೈರುತ್ಯದಲ್ಲಿ ದುರ್ಗಾಪರಮೇಶ್ವರೀ ಅಮ್ಮನವರ ವಿಗ್ರಹವನ್ನು ಪ್ರತ್ಯೇಕ ಗುಡಿಗಳಲ್ಲಿ ಸ್ಥಾಪಿಸಿ ಪ್ರತಿನಿತ್ಯ ಕ್ರಮಪ್ರಕಾರ ಅರ್ಚನೆ ಹಾಗೂ ಹೊರ ಪೌಳಿಯ ನೈರುತ್ಯದಲ್ಲಿ ನಾಗನ ಕಟ್ಟೆಯನ್ನು 1973 ರಲ್ಲಿ ನಾಗನ ಕಟ್ಟೆ ಪ್ರತಿಷ್ಟಾಪನೆ ಮಾಡಿ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ‌.
ಮಕರ ಸಂಕ್ರಮಣದಲ್ಲಿ ನೆಡೆಯುವ ಸಾಲಿಗ್ರಾಮ ಹಬ್ಬ ಈ ಭಾಗ ದೊಡ್ಡಜಾತ್ರೆಗಳಲ್ಲೊಂದು. ಪ್ರತಿ ಶನಿವಾರ ಮತ್ತು ಸಂಕ್ರಮಣ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು. ಶ್ರಾವಣ ಶನಿವಾರಗಳಲ್ಲಿ ಜಾತ್ರೆಯ ವಾತವರಣ ಇರುತ್ತದೆ.

ನೃಸಿಂಹತಾಪಿನ್ಯುಪನಿಷತ್(ಪೂರ್ವ ಮತ್ತು ಉತ್ತರ) ನೃಸಿಂಹನ ಉಪಾಸನೆಗೆ ಪ್ರಧಾನ ಆಧಾರಶೃತಿಗಳಾಗಿವೆ. ಅವ್ಯಕ್ತೋಪನಿಷತ್ತಿನಲ್ಲಿಯೂ ಗುರುನೃಸಿಂಹಧ್ಯಾನಮಂತ್ರದ ವ್ಯಾಖ್ಯಾನವಿದೆ‌. ಉಗ್ರಂ ಎಂಬುದು ಗುರುಧ್ಯಾನಮಂತ್ರದ ಆದಿಪದವು ಆದ್ದರಿಂದ “ಉಗ್ರ ನೃಸಿಂಹ” ಎಂದು ಹೇಳಲು ಕಾರಣವಾಗಿದೆ.

ಸರ್ವರಿಗೂ ನರಸಿಂಹ ಜಯಂತಿಯ ಶುಭಾಶಯಗಳು.

– ವಿಶ್ವಾಸ್.ಎಸ್.ಭಟ್,ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!